ಬೆಂಗಳೂರು, ಜ.15- ಪೊಲೀಸರ ಸೋಗಿನಲ್ಲಿ ಎಂಜನಿಯರ್ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಇಬ್ಬರು ರೌಡಿಗಳು ಸೇರಿದಂತೆ ಐವರು ಆರೋಪಿಗಳನ್ನು ಮಹಾಲಕ್ಷ್ಮೀಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 31ರಂದು ಹೊಸ ವರ್ಷದ ಮುನ್ನಾ ದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಹಾಲಕ್ಷ್ಮೀಪುರಂನ ಎರಡನೇ ಹಂತದ ಆದಿತ್ಯ ಹೋಟೆಲ್ ಹಿಂಭಾಗದಲ್ಲಿ ವಾಸವಿರುವ ಇಂಜಿನಿಯರ್ ಡಿ.ಸಾಮ್ಯನಾಯ್ಕ್ ಅವರ ಮನೆಗೆ ತಿಪಟೂರು ಪೊಲೀಸ್ ಠಾಣೆಯ ಕ್ರೈಮ್ ಬ್ರಾಂಚ್‍ನವರು ಎಂದು ಹೇಳಿಕೊಂಡು 4-5 ಮಂದಿ ಅಪರಿಚಿತರು ನುಗ್ಗಿದರು.
ಚಾಕು ತೋರಿಸಿ ಬೆದರಿಸಿ ಮನೆಯಲ್ಲಿಟ್ಟಿದ್ದ 19 ಲಕ್ಷ ರೂಪಾಯಿ ನಗದು, 500 ಗ್ರಾಂ ಚಿನ್ನವನ್ನು ತೆಗೆದುಕೊಂಡು ಸಾಮ್ಯನಾಯ್ಕ್ ಹಾಗೂ ಅವರ ಮಗ ಮನೋಹರ್‍ನನ್ನು ದೂರುದಾರರ ಕಾರಿನಲ್ಲೇ ಕೂರಿಸಿಕೊಂಡು ನಗರದ ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಎಂ.ಎಸ್.ಪಾಳ್ಯದಲ್ಲಿ ಸುತ್ತಾಡಿಸಿ 20 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸಿದರು.
ಕೊನೆಗೆ ಮನೆಯಿಂದ ತಂದಿದ್ದ ಹಣವನ್ನು ಜಪ್ತಿ ಮಾಡುತ್ತಿದ್ದೇವೆ ಎಂದು ಹೇಳಿ ತಂದೆ-ಮಗನ್ನು ಕಾರಿನಲ್ಲೇ ಬಿಟ್ಟು ಆಟೋ ಹತ್ತಿ ಪರಾರಿಯಾಗಿದ್ದರು. ಸಾಮ್ಯನಾಯ್ಕ್ ನೀಡಿದ ದೂರು ಆಧರಿಸಿ ಮಹಾಲಕ್ಷ್ಮೀಲೇಔಟ್ ಠಾಣೆ ಪೊಲೀಸರು ದರೋಡೆ, ಅಪಹರಣ, ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದ್ವಿಚಕ್ರವಾಹನ ಕಳ್ಳ ಹಾಗೂ ಫೋಟೋ ಗ್ರಾಫರ್ ಪುನೀತ್, ಪೀಣ್ಯ, ಬಾಗಲಕುಂಟೆ ಪೊಲೀಸ್ ಠಾಣೆಗಳ ರೌಡಿ ಆಸಾಮಿ ಬಾಲಕೃಷ್ಣ, ಫೋಟೋಗ್ರಾಫರ್ ಹಾಗೂ ದೂರುದಾರರ ಸಂಬಂಧಿ ರೋಹನ್, ದ್ವಿಚಕ್ರ ವಾಹನ ಕಳ್ಳ ಪೃಥ್ವಿ, ಕೊಲೆ ಆರೋಪಿ ಚೇತನ್ ಸೇರಿ 5 ಜನ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 16 ಲಕ್ಷ ರೂ. ಬೆಲೆಬಾಳುವ 318 ಗ್ರಾಂ ತೂಕದ ಚಿನ್ನಾಭರಣ ಮತ್ತು 10.3 ಲಕ್ಷ ರೂ. ನಗದು ಹಣ, ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರವಾಹನಗಳು, 1 ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೂರನೇ ಆರೋಪಿ ರೋಹನ್ ದೂರುದಾರ ಸಾಮ್ಯನಾಯ್ಕ್ ಅವರ ಸಂಬಂಧಿಯಾಗಿದ್ದು, ಸಾಮ್ಯನಾಯ್ಕ್ ಅವರ ಬಳಿ ಸಾಕಷ್ಟು ಹಣವಿದೆ. ತಾನು ಸ್ವಯಂ ಉದ್ಯೋಗ ವ್ಯವಹಾರ ಮಾಡಲು ಹಣ ಕೇಳಿದರೆ ಕೊಡುತ್ತಿಲ್ಲ ಎಂಬ ಅಸಮಧಾನ ಹೊಂದಿದ್ದ. ಆರೋಪಿಯು ಹಣ ಕೇಳಿದಾಗ ಸಾಮ್ಯನಾಯ್ಕ್ ಅವರು ಸದ್ಯಕ್ಕೆ ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು, ಮಗಳ ಮದುವೆ ಮಾಡಬೇಕು.
ಈ ಸಮಯದಲ್ಲಿ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿರುತ್ತಾರೆ. ಇದರಿಂದ ಬೇಸರಗೊಂಡ ರೋಹನ್ ತನ್ನ ಸ್ನೇಹಿತರಾದ ಪುನೀತ್, ಬಾಲಕೃಷ್ಣ, ಪೃಥ್ವಿ ಅವರನ್ನು ಸಂಪರ್ಕಿಸಿ, ವಿಚಾರ ತಿಳಿಸಿದ್ದಾನೆ. ಮತ್ತಿಬ್ಬರು ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ.
ಪುನೀತ್ ಮತ್ತು ಪೃಥ್ವಿ ಸುಬ್ರಮಣ್ಯನಗರ ಮತ್ತು ಗಂಗಮ್ಮಗುಡಿ ಪೊಲೀಸ್ ಠಾಣೆಯ ದ್ವಿಚಕ್ರವಾಹನ ಕಳವು ಪ್ರಕರಣಗಳ ಪುನರಾವರ್ತಿತ ಆರೋಪಿಗಳಾಗಿರುತ್ತಾರೆ. ಬಾಲಕೃಷ್ಣ ಬಾಗಲಗುಂಟೆ ಮತ್ತು ಪೀಣ್ಯ ಪೊಲೀಸ್ ಠಾಣೆ ರೌಡಿ ಆಸಾಮಿಯಾಗಿದ್ದು, ಬಾಗಲಗುಂಟೆ, ಪೀಣ್ಯ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಮಂಡ್ಯ ಜಿಲ್ಲೆ ಪೂರ್ವ ಮತ್ತು ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿರುತ್ತದೆ.
ಆರೋಪಿ ಚೇತನ್ 2019 ನೇ ಸಾಲಿನಲ್ಲಿ ಯಲಹಂಕ ಪೊಲೀಸ್ ಠಾಣೆಯ ಕೊಲೆ ಪ್ರಕರಣದಲ್ಲಿ ಭಾಗಿ ಜೈಲಿಗೆ ಹೋಗಿ ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲೇಶ್ವರಂನ ಎಸಿಪಿಕೆ.ಎಸ್. ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಕಾಂತರಾಜ ಹೆಚ್.ಎಂ. ನೇತೃತ್ವದಲ್ಲಿ ಪಿಎಸ್‍ಐಗಳಾದ ಲೇಪಾಕ್ಷಮೂರ್ತಿ ಆರ್.ಜಿ., ವಿನಾಯಕ ಕೆ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
