ಗೋಲಿ ಆಡಲು ಬಾರದ ಸ್ನೇಹಿತನ ಕೊಂದ ಇಬ್ಬರಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ, ಏ.21- ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನನ್ನೇ ಕೊಲೆಗೈದು ಸಾಕ್ಷ್ಯ ನಾಶದ ಆರೋಪದಡಿ ಇಲ್ಲಿನ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಕೊಲೆಗೀಡಾದ ಭರತ್ ಮತ್ತು ಆರೋಪಿಗಳಾದ ಅಶೋಕ್, ಶಿಲ್ಪಾಚಾರಿ ಗೆಳೆಯರಾಗಿದ್ದು, ಹಳೆ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಪ್ರತಿದಿನ ಗೋಲಿ ಆಡುತ್ತಿದ್ದರು.

ಒಂದು ದಿನ ಆರೋಪಿ ಅಶೋಕ್ ಗೋಲಿ ಆಡಲು ಬಂದಿರಲಿಲ್ಲ. ಕೊಲೆಯಾದ ದಿನ 2018ರ ಜು.10ರ ಸಂಜೆ 6 ಗಂಟೆ ಸಮಯದಲ್ಲಿ ಹಬ್ಬದ ಸಂಭ್ರಮಕ್ಕಾಗಿ ಮದ್ಯಪಾನ ಮಾಡುತ್ತಿದ್ದಾಗ ಕೊಲೆಗೀಡಾದ ಭರತ್ ಅಶೋಕ್‍ಗೆ ಗೋಲಿ ಆಡಲು ಯಾಕೆ ಬರಲಿಲ್ಲ ಎಂದು ಕೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿ ತಾರಕಕ್ಕೇರಿದೆ. ಭರತ್ ಅಶೋಕ್‍ಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆಯಲು ಹೋದಾಗ ತಪ್ಪಿಸಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಶಿಲ್ಪಾಚಾರಿಗೆ ತಗುಲಿ ಕೈ ಬೆರಳು ಇತರೆಡೆ ಗಾಯಗಳಾಗಿವೆ.

ಇದರಿಂದ ಸಿಟ್ಟಿಗೆದ್ದ ಅಶೋಕ್ ಮತ್ತು ಶಿಲ್ಪಾಚಾರಿ ಭರತ್ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ತೀವ್ರ ಹಲ್ಲೇ ನಡೆಸಿದಾಗ ಭರತ್ ಮೃತಪಟ್ಟಿದ್ದಾನೆ. ಭರತ್ ಸತ್ತ ನಂತರ ಅವನಲ್ಲಿದ್ದ ಹಣ, ಉಂಗುರ, ಪರ್ಸ್ ತೆಗೆದುಕೊಂಡಿದ್ದಾರೆ. ಮೈಮೇಲೆ ಖಾರದ ಪುಡಿ ಚೆಲ್ಲಿದರೆ ಹಂದಿಗಳು ತಿನ್ನುತ್ತವೆ ಎಂದು ಖಾರದಪುಡಿ ಮೈಮೇಲೆ ಹಾಕಿ, ಸಾಕ್ಷ್ಯನಾಶಪಡಿಸಲು ಯತ್ನಿಸಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಬಡಾವಣಾ ಠಾಣೆ ಪೊಲೀಸರು ಇಬ್ಬರನ್ನು ಬಂಸಿದ್ದರು. ಅಂದಿನ ವೃತ್ತ ನಿರೀಕ್ಷಕ ಇ.ಆನಂದ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾೀಶ ಎನ್.ಶ್ರೀಪಾದ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಶಿಕ್ಷೆ ವಿಧಿಸಿ, ತಲಾ 35 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರ ಅಭಿಯೋಜಕ ಕೆ.ಜಿ. ಜಯಪ್ಪ ವಾದ ಮಂಡಿಸಿದ್ದರು.