3 ರೂ. ಹಾಲಿನ ಮಾರಾಟ ದರ ಹೆಚ್ಚಳಕ್ಕೆ ಸಿಎಂಗೆ ಕೆಎಂಎಫ್ ಮನವಿ

ಬೆಂಗಳೂರು, ಏ.27- ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ.30ರಷ್ಟು ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವಂತೆ ಹಾಲಿನ ಮಾರಾಟ ದರವನ್ನು ಹೆಚ್ಚಳ ಮಾಡಲು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರತಿ ಲೀಟರ್ ನಂದಿನಿ ಹಾಲಿಗೆ ಕನಿಷ್ಠ 3 ರೂ.ಗಳನ್ನು ಹೆಚ್ಚಿಗೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಅವರು ಕೋರಿದ್ದಾರೆ. ಅಮೂಲ್ ಸೇರಿದಂತೆ ದೇಶದ ವಿವಿಧ ಸಹಕಾರ ಮತ್ತು ಖಾಸಗಿ ಸಂಸ್ಥೆಗಳ ಹಾಲಿನ ಮಾರಾಟ ದರವನ್ನು ಈಗಾಗಲೇ ಹೆಚ್ಚಿಸಿದ್ದು, ನಂದಿನಿ ಹಾಲಿನ ಮಾರಾಟ ದರಕ್ಕೆ ಹೋಲಿಕೆ ಮಾಡಿದಾಗ ಇತರೆ ಸಂಸ್ಥೆಗಳ ದರವು ಪ್ರತಿ ಲೀಟರ್‍ಗೆ 8 ರಿಂದ 10 ರೂ.ಗೆ ಹೆಚ್ಚಳವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಳ ಮಾಡುವ 3ರೂ.ಗಳಲ್ಲಿ ಕನಿಷ್ಠ 2ರೂ.ಗಳನ್ನು ಹಾಲು ಉತ್ಪಾದಕರಿಗೆ ಮತ್ತು ಉಳಿದ 1ರೂ.ಗಳನ್ನು ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಉತ್ಪಾದಕರ ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕೆಎಂಎಫ್ ಹಾಗೂ ರಾಜ್ಯದಲ್ಲಿರುವ ಎಲ್ಲ 14 ಹಾಲು ಒಕ್ಕೂಟಗಳ ಒಟ್ಟಾರೆ ವಹಿವಾಟು 2019-20ರಲ್ಲಿ 16,440.74 ಕೋಟಿ ರೂ. ಇದ್ದು, ಪ್ರಸಕ್ತ ಸಾಲಿಗೆ 19,732 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಶೇ.20ರಷ್ಟು ವಹಿವಾಟು ಹೆಚ್ಚಳವಾಗಿದ್ದು, 2022-23ನೇ ಸಾಲಿನಲ್ಲಿ ಒಟ್ಟಾರೆ 25 ಸಾವಿರ ಕೋಟಿ ರೂ. ತಲುಪುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ ಕೆಎಂಎಫ್‍ನಿಂದ ನೀಡಲಾಗುತ್ತಿರುವ ಅನುದಾನವನ್ನು 3.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 2020-21ನೇ ಸಾಲಿನಲ್ಲಿ 250 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು 10.57 ಕೋಟಿ ರೂ. ಅನುದಾನ ನೀಡಲಾಗಿದ್ದು, 2021-22ನೇ ಸಾಲಿನಲ್ಲಿ 15.15 ಕೋಟಿ ರೂ.ಗಳ ಅನುದಾನವನ್ನು ಇದಕ್ಕೆ ತೆಗೆದಿರಿಸಲಾಗಿದೆ ಎಂದರು.

ಪಶು ಸಂಗೋಪನೆ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. 2019-20ರಲ್ಲಿ ವಾರ್ಷಿಕವಾಗಿ ಕೆಎಂಎಫ್ 40-50 ಕೋಟಿ ರೂ.ಗಳನ್ನು ಈ ಯೋಜನೆಗಳಿಗೆ ನೀಡಲಾಗುತ್ತಿದ್ದು, ಮುಂದಿನ ಆಯವ್ಯಯದಲ್ಲಿ 50 ಕೋಟಿ ರೂ. ನೀಡುತ್ತಿರುವುದನ್ನು 80 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಮುಂದಿನ 5 ವರ್ಷಗಳಲ್ಲಿ ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆ ರೂಪಿಸಿದ್ದು, 2026-27ನೇ ಸಾಲಿಗೆ 133.84 ಲಕ್ಷ ಲೀಟರ್ ಹಾಲು ಶೇಖರಿಸುವ ಗುರಿ ಹೊಂದಲಾಗಿದೆ. ಅದರಲ್ಲಿ 110 ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನಗಳ ರೂಪದಲ್ಲಿ ಮತ್ತು ಉಳಿದ ಹಾಲನ್ನು ಹಾಲಿನ ಪುಡಿ ಪರಿವರ್ತನೆಗಾಗಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಕೆಫೆ ಕಾಫೀ ಡೇ ಮಾದರಿಯಲ್ಲಿ ನಂದಿನಿ ಮಾದರಿಯಲ್ಲಿ ವಿನೂತನ ನಂದಿನಿ ಕೆಫೆ ಮ್ಹೂ ಅನ್ನು ಈಗಾಗಲೇ ರಾ ಜ್ಯಾದ್ಯಂತ ಸ್ಥಾಪಿಸಲಾಗಿದೆ. ಮುಂದಿನ ವರ್ಷದಿಂದ ಬೇರೆ ಬೇರೆ ನಗರಗಳಲ್ಲಿ 100ಕ್ಕೂ ಅಕ ವಿನೂತನ ನಂದಿನಿ ಕೆಫೆ ಮ್ಹೂ ಸ್ಥಾಪಿಸುವ ಗುರಿ ಹೊಂದಲಾಗಿದೆ. ಅಮೇರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ಥಾನ, ಭೂತಾನ್, ಸಿಂಗಾಪೂರ, ಬಹರೆನ್ ಮುಂತಾದ ವಿವಿಧ ದೇಶಗಳಿಗೆ 20 ಕೋಟಿ ಅಧಿಕ ಮೌಲ್ಯದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ. 2022-23ರಲ್ಲಿ ಒಟ್ಟು 300 ಕೋಟಿ ರೂ. ಮೌಲ್ಯದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದಿದ್ದಾರೆ.

ಪ್ರತಿ ತಿಂಗಳಲ್ಲಿ 45 ಸಾವಿರ ಟನ್ ಪೂರೈಕೆಯಾಗುತ್ತಿದ್ದ ಪಶು ಆಹಾರ ಪ್ರಮಾಣವನ್ನು 65 ಸಾವಿರ ಟನ್‍ಗೆ ಹೆಚ್ಚಿಸಲಾಗಿದೆ. ಈ ಗುರಿಯನ್ನು ಮುಂದಿನ ಸಾಲಿಗೆ 75 ಸಾವಿರ ಟನ್ ಗುಣಮಟ್ಟದ ಪಶು ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.