ಕೆಎಂಎಫ್ ಕಾರ್ಯ ಶ್ಲಾಘನೀಯ : ಪ್ರಧಾನಿ ಮೋದಿ ಮೆಚ್ಚುಗೆ

Social Share

ನೋಯಿಡಾ(ಉತ್ತರ ಪ್ರದೇಶ),ಸೆ.13-ಕಳೆದ ಐದು ದಶಕಗಳಿಂದ ರೈತರ ಸೇವೆ ಮಾಡುತ್ತಿರುವ ಕೆಎಂಎಫ್ ಕಾರ್ಯ ಶ್ಲಾಘನೀಯವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. ಉತ್ತರ ಪ್ರದೇಶದ ಗ್ರೇಟರ್ ನೋಯಿಡಾ ನಗರದಲ್ಲಿ ಆರಂಭಗೊಂಡಿರುವ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಕೆಎಂಎಫ್ ನ ನಂದಿನಿ ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿದ ಅವರು, ಸಹಕಾರಿ ವಲಯದಲ್ಲಿ ಕರ್ನಾಟಕದ ಕೆಎಂಎಫ್ ಉತ್ತಮ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.

ಹೈನುಗಾರಿಕೆ ಅವಲಂಬಿಸಿರುವ ರೈತ ಸಮುದಾಯ ಅದರಲ್ಲೂ ವಿಶೇಷವಾಗಿ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ É ವಿಶೇಷ ಯೋಜನೆ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಲಹೆ ನೀಡಿದರು.

ಕೆಎಂಎಫ್‍ನ ಕಾರ್ಯಚಟುವಟಿಕೆಗಳ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಧಾನಿಗಳಿಗೆ ವಿಸ್ತೃತ ಮಾಹಿತಿ ನೀಡಿದರು. ಕರ್ನಾಟಕದ 24184 ಹಳ್ಳಿಗಳಲ್ಲಿ ಸುಮಾರು 15043 ಹಾಲು ಉತ್ಪಾದಕರ ಸಹಕಾರಿ ಸಂಘಗಳು, 16 ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳನ್ನು ಹೊಂದಿದೆ. 26 ಲಕ್ಷ ಹಾಲು ಉತ್ಪಾದಕ ಸದಸ್ಯರು, 10 ಲಕ್ಷ ಹಾಲು ಸರಬರಾಜುದಾರರು, 91.88 ಲಕ್ಷ ಕೆಜಿ ಗರಿಷ್ಠ ಹಾಲು ಶೇಖರಣೆ ಮಾಡಲಾಗುತ್ತಿದೆ. ಪ್ರತಿದಿನ ರೈತರಿಗೆ 30 ಕೋಟಿ ರೂ. ಹಣ ಪಾವತಿ ಮಾಡುತ್ತಿದ್ದು, 170ಕ್ಕೂ ಅಧಿಕ ನಂದಿನಿ ಹಾಲಿನ ಉತ್ಪನ್ನಗಳನ್ನು ಕೆಎಂಎಫ್ ಉತ್ಪಾದಿಸುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಹಾಲು ಮಹಾಮಂಡಳ ನಂದಿನಿ ಬ್ರಾಂಡ್ ಬಗ್ಗೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲು ವಿಶ್ವ ಡೇರಿ ಶೃಂಗಸಭೆ ಉತ್ತಮ ವೇದಿಕೆಯಾಗಿದ್ದು, ಬ್ರಾಂಡ್ ಮೌಲ್ಯವರ್ಧನೆ ಮತ್ತು ವಹಿವಾಟು ವಿಸ್ತರಣೆ ಸದುದ್ದೇಶದಿಂದ ಕಾರ್ಯಾಗಾರದಲ್ಲಿ ನಂದಿನಿ ಉತ್ಪನ್ನಗಳ ಪ್ರದರ್ಶನದ ಆಕರ್ಷಕ ಮಳಿಗೆ ತೆರೆಯಲಾಗಿತ್ತು.

ಕೆಎಂಎಫ್ ಆಡಳಿತ ಮಂಡಳಿ ಸದಸ್ಯರು, ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಒಕ್ಕೂಟಗಳ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಕಹಾಮ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Articles You Might Like

Share This Article