ಬೆಂಗಳೂರು,ಜು.18- ಇನ್ನು ಮುಂದೆ ನಂದಿನಿ ಉತ್ಪನ್ನಗಳು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆ. ಏಕೆಂದರೆ ಕೆಎಂಎಫ್‍ನಿಂದ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ. ನೂತನ ದರವು ಸೋಮವಾರದಿಂದಲೇ ಜಾರಿಯಾಗಿದ್ದು, ಒಂದು ಲೀಟರ್ ಮೊಸರಿಗೆ 3 ರೂ.ಹೆಚ್ಚಳ, ಮಜ್ಜಿಗೆ 200ಎಂಎಲ್‍ಗೆ 1 ರೂಪಾಯಿ ಹೆಚ್ಚಳ ಹಾಗೂ ಲಸ್ಸಿ 200ಎಂಎಲ್‍ಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಸದ್ಯಕ್ಕೆ ಹಳೆಯ ದರ ನಮೂದಿಸಲಾಗಿದ್ದರೂ ಮೊಸರಿನ 200 ಗ್ರಾಂ, ಅರ್ಧ ಹಾಗೂ ಒಂದು ಲೀಟರ್ ಬೆಲೆಗೆ ಕ್ರಮವಾಗಿ ಜಿಎಸ್‍ಟಿ ವಿಸಿರುವುದರಿಂದ 12 (2ರೂ. ಏರಿಕೆ), 24 (2ರೂ. ಏರಿಕೆ) ಹಾಗೂ 46 ರೂ.(3 ರೂ. ಏರಿಕೆ) ನಿಗದಿಪಡಿಸಲಾಗಿದೆ.
ಹಿಂದಿನ ಬೆಲೆಗೆ ಹೋಲಿಸಿದರೆ 2ರೂ ರಿಂದ 3 ರೂ. ದರ ಏರಿಕೆಯಾದಂತಾಗಿದೆ.

200 ಮಿ.ಲೀ ಮಜ್ಜಿಗೆ, ಟೆಟ್ರಾ ಪ್ಯಾಕ್ ಹಾಗೂ ಪೆಟ್ ಬಾಟಲ್ ದರವು ಕ್ರಮವಾಗಿ 8, 11 ಹಾಗೂ 13 ರೂ. ಗಳಾಗಿದೆ (1 ರೂ ಹೆಚ್ಚಳ). ಇನ್ನೂ 200 ಮಿ.ಲೀ ಲಸ್ಸಿ (11ರೂ.), ಟೆಟ್ರಾ ಪ್ಯಾಕೇಟ್ ಸಾದಾ (21 ರೂ.), ಟೆಟ್ರಾ ಪ್ಯಾಕ್ ಮ್ಯಾಂಗೋ (27 ರೂ.), ಪೆಟ್ ಬಾಟಲ್ ಸಾದಾ (16 ರೂ.), ಪೆಟ್ ಬಾಟಲ್ ಮ್ಯಾಂಗೋ (21 ರೂ.) ಬೆಲೆ ನಿಗದಿಪಡಿಸಲಾಗಿದೆ.
ದಾಸ್ತಾನು ಇರುವವರೆಗೆ ಹಳೆಯ ದರಗಳ ಮುದ್ರಿತ ಸರಕು: ದಾಸ್ತಾನು ಮುಗಿಯುವ ತನಕ ಸರಕುಗಳ ಮೇಲೆ ಹಳೆಯ ದರಗಳ ಮುದ್ರಣ ಇರಲಿದೆ. ಸದ್ಯ ಇಂಕ್‍ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಮುದ್ರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಬದಲಾದ ಮುದ್ರಿತ ದರಗಳ ಸರಕುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ನಾವು ಲೀಟರ್ ನಂದಿನಿ ಹಾಲನ್ನು 37 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಕರ್ನಾಟಕದ ಎಲ್ಲಾ ಹಾಲು ಒಕ್ಕೂಟಗಳು ಬೆಲೆಯಲ್ಲಿ ಪರಿಷ್ಕರಣೆಗಾಗಿ ಸರ್ವಾನುಮತದಿಂದ ಕೋರಿವೆ. ಆದ್ದರಿಂದ ನಾವು ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪರಿಷ್ಕೃತ ದರಕ್ಕೆ ಅನುಮೋದನೆ ಪಡೆಯುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜರಕಿಹೊಳಿ ಹೇಳಿದ್ದಾರೆ.
ಜೂನ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‍ಟಿ ಮಂಡಳಿಯ 47ನೇ ಸಭೆಯು ಹಾಲಿನ ಉತ್ಪನ್ನಗಳು ಹಾಗೂ ಆಹಾರ ಧಾನ್ಯಗಳಿಗೆ ನೀಡಿದ್ದ ವಿನಾಯಿತಿ ತೆಗೆದುಹಾಕಲು ನಿರ್ಣಯ ತೆಗೆದುಕೊಂಡಿತ್ತು.
ಬೆಲೆ ಹೆಚ್ಚಳಕ್ಕೆ ಸಾರ್ವಜನಿಕರ ಆಕ್ರೋಶ: ಈಗಾಗಲೇ ಕೋವಿಡ್, ಅತಿವೃಷ್ಟಿ, ವಿದ್ಯುತ್ ದರ ಏರಿಕೆ ಮತ್ತು ಮುಂತಾದ ಕಾರಣಗಳಿಂದ ಕಂಗಾಲಾಗಿರುವ ಸಾಮಾನ್ಯ ಜನತೆಗೆ ಹಾಲು ಉತ್ಪನ್ನಗಳ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.