ಹಾಲಿನ ದರ ಏರಿಸುವ ಕೆಎಂಎಫ್ ಬೇಡಿಕೆ ತಿರಸ್ಕರಿಸಿದ ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಸೆ.26- ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಹಾಲಿನ ದರ ಏರಿಕೆ ಮಾಡಬೇಕೆಂಬ ಕೆಎಂಎಫ್ ಬೇಡಿಕೆಯನ್ನು ಮುಖ್ಯಮಂತ್ರಿ ತಿರಸ್ಕರಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸುವುದು ಸಮಂಜಸವಲ್ಲ. ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಇಂಥ ಸಂದರ್ಭದಲ್ಲೇ ಹಾಲಿನ ದರ ಏರಿಕೆ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹೀಗಾಗಿ ಸದ್ಯಕ್ಕೆ ಈ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹಾಲು ಒಕ್ಕೂಟ ಮಂಡಳಿಯ ನಿರ್ದೇಶಕರಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಏಕಾಏಕಿ ಒಂದು ಲೀಟರ್ಗೆ 3 ದರ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈಗಿನ ಸಂದರ್ಭದಲ್ಲಿ ಕೆಎಂಎಫ್ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಸಮಂಜಸವಲ್ಲ. ಪರಿಸ್ಥಿತಿ ನೋಡಿಕೊಂಡು ಸೂಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ.

ಅಷ್ಟಕ್ಕೂ ಕೆಎಂಎಫ್ ನಷ್ಟದ ಸುಳಿಗೆ ಸಿಲುಕಿಲ್ಲ. ಸಾರಿಗೆ ಇಲಾಖೆ ಸತತ ಎರಡು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದರೂ ನಾವು ಪ್ರಯಾಣಿಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕಾಗಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಿ ಹಾಲು ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವಿಸ್ತರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪ್ರತಿ ಲೀಟರ್ ಹಾಲಿನ ದರದಲ್ಲಿ 4 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಮೂರು ತಿಂಗಳ ಹಿಂದೆಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಜ್ಯ ಪಶು ಸಂಗೋಪನಾ ಇಲಾಖೆ ಎಲ್ಲ ಒಕ್ಕೂಟಗಳಿಗೂ ಸೂಚನೆ ಹೊರಡಿಸಿ, ಲೀಟರ್ಗೆ 3 ರೂ. ಅಥವಾ 2 ರೂ. ಏರಿಕೆ ಮಾಡಿದಲ್ಲಿ ಅದರಿಂದ ರೈತರಿಗೆ ಎಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡುತ್ತೀರಿ ಎಂದು ವಿವರಣೆ ಕೇಳಿತ್ತು.

ವಿಲೇವಾರಿ ತೊಂದರೆ:

ಒಂದು ವೇಳೆ ಹಾಲಿನ ದರ ಏರಿಕೆ ಮಾಡಿದಲ್ಲಿ ಹಾಲು ಸಂಗ್ರಹ ಪ್ರಮಾಣ ಮತ್ತಷ್ಟು ಹೆಚ್ಚಾಗಿ ಅದನ್ನು ವಿಲೇವಾರಿ ಮಾಡುವುದು ಕಷ್ಟವಾಗಲಿದೆ ಎಂದೂ ಕೆಎಂಎಫ್ನ ಕೆಲ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಬೇಸಿಗೆ ಸಂದರ್ಭದಲ್ಲಿಯೂ ಪ್ರತಿದಿನ 55 ಲಕ್ಷ ಲೀ.ಗೂ ಹೆಚ್ಚಿನ ಹಾಲು ಸಂಗ್ರಹ ಆಗುತ್ತದೆ.

ಏಪ್ರಿಲ್ ಬಳಿಕ ಬಹುತೇಕ ಮಳೆಗಾಲ ಆರಂಭವಾಗಲಿದ್ದು, ನೀರು ಮತ್ತು ಹಸಿ ಮೇವಿನ ಲಭ್ಯತೆ ಹೆಚ್ಚಾಗುತ್ತದೆ. ಆಗ ಹಾಲಿನ ಸಂಗ್ರಹ ಮತ್ತಷ್ಟು ಹೆಚ್ಚಾಗುತ್ತದೆ. ಬೇಸಿಗೆ ಆರಂಭವಾಗುವ ಮುನ್ನವೇ ಹಾಲಿನ ದರ ಹೆಚ್ಚಳ ಮಾಡಬೇಕು. ಅದುಬಿಟ್ಟು ಮಳೆಗಾಲದಲ್ಲೇ ದರ ಏರಿಸಿದರೆ ವಿಲೇವಾರಿ ಕಷ್ಟವಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Articles You Might Like

Share This Article