ಬೆಂಗಳೂರು,ಜು.13- ಕೊಡಗು, ದಕ್ಷಿಣ ಕನ್ನಡ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಮಳೆ ಕಡಿಮೆಯಾಗಿರುವುದರಿಂದ ಕಾವೇರಿ ಕಣಿವೆಯ ನದಿಗಳ ಪ್ರವಾಹವು ಇಳಿಕೆಯಾಗತೊಡಗಿದೆ. ಕೆಆರ್‍ಎಸ್ ಜಲಾಶಯಕ್ಕೆ ನಿನ್ನೆ 72ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು,ಇಂದು 57 ಸಾವಿರ ಕ್ಯೂಸೆಕ್‍ಗೆ ಇಳಿಕೆಯಾಗಿದೆ.
ಆದರೆ, ಕಬಿನಿ ಜಲಾಶಯಕ್ಕೆ ಮಾತ್ರ 34ಸಾವಿರ ಕ್ಯೂಸೆಕ್‍ನಷ್ಟು ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ 38 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಬಿಡಲಾಗಿದೆ. ಕೆಆರ್‍ಎಸ್ ಜಲಾಶಯದಿಂದ 51ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಹಾರಂಗಿ ಜಲಾಶಯಕ್ಕೆ 18ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಬರುತ್ತಿದ್ದದ್ದು ಈಗ 12 ಸಾವಿರ ಕ್ಯೂಸೆಕ್‍ಗೆ ಇಳಿಕೆಯಾಗಿದೆ. ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಹೇಮಾವತಿ ಜಲಾಶಯಕ್ಕೂ 20ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 6 ಸಾವಿರ ಕ್ಯೂಸೆಕ್‍ಗೂ ನೀರು ಹೊರ ಬಿಡಲಾಗುತ್ತಿದೆ. ಹೀಗಾಗಿ ಸದ್ಯದಲ್ಲೇ ಈ ಜಲಾಶಯವು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಲಿದೆ.
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಆ ಭಾಗದ ನದಿಗಳಲ್ಲಿ ನೀರಿನ ಮಟ್ಟವೂ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ, ಶಿವಮೊಗ್ಗ, ಬೀದರ್ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ.
ಲಿಂಗನಮಕ್ಕಿ, ವರಾಹಿ, ಸೂಪಾ ಜಲಾಶಯಗಳಿಗೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣ ಕೊಳ್ಳದ ಆಲಮಟ್ಟಿ, ನಾರಾಯಣಪುರ ಜಲಾಶಯಕ್ಕೂ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಇದೇ ರೀತಿ ಒಳ ಹರಿವು ಮುಂದುವರೆದರೆ ವಾರಾಂತ್ಯದೊಳಗೆ ಈ ಜಲಾಶಯಗಳು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಲಿವೆ.
ಹವಾಮುನ್ಸೂಚನೆ ಪ್ರಕಾರ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.