ಬೆಂಗಳೂರು, ಮಾ.9- 20 ವರ್ಷಗಳಿಂದ ನಮಗೆ ಉಸ್ತುವಾರಿ ಸಚಿವರಿಲ್ಲ. ಆಡಳಿತಾರೂಢ ಪಕ್ಷದಲ್ಲಿ ಶಾಸಕರು ಗೆದ್ದಿದ್ದರೂ ನಮ್ಮ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಲಿಲ್ಲ. ಹಾಗಾಗಿ ನಾನು ಸದನದಲ್ಲಿ ಪದೇ ಪದೇ ಕೊಡಗು ಜಿಲ್ಲೆಯ ಬಗ್ಗೆ ಪ್ರಶ್ನೆ ಕೇಳುವಂತಾಗಿದೆ ಎಂದು ಕಾಂಗ್ರೆಸ್ ಸದಸ್ಯೆ ಅಳಲು ತೋಡಿಕೊಂಡ ಪ್ರಸಂಗ ವಿಧಾನ ಪರಿಷತ್ ನಲ್ಲಿ ನಡೆಯಿತು.
ವೀಣಾ ಅಚ್ಚಯ್ಯ, ಕೊಡಗು ಜಿಲ್ಲೆಯ ಅವಂಡಿ ಗ್ರಾಮದ ನಾಪಂಡ ಕಾಡು ಎಂಬಲ್ಲಿ ಮುಕ್ಕೋಡ್ಲು ಹೊಳೆಗೆ ಸೇತುವೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಪ್ರಶ್ನೆ ಕೇಳುತ್ತಿದ್ದೇನೆ. ಒತ್ತಾಯ ಮಾಡುತ್ತಿದ್ದೇನೆ. ಸುಮಾರು ಒಂದುವರೆ ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಸೇತುವೆ ನಿರ್ಮಾಣಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ. ಸಣ್ಣ ಕೆಲಸಕ್ಕೂ ಈ ಸದನದಲ್ಲೂ ಪ್ರಶ್ನೆ ಕೇಳಬೇಕೆ ಎಂದು ಅಸಮದಾನ ವ್ಯಕ್ತ ಪಡಿಸಿದರು.
ಲೋಕೋಪಯೋಗಿ ಸಚಿವರ ಪರವಾಗಿ ವಿ.ಸೋಮಣ್ಣ ಉತ್ತರ ನೀಡಿ, ಎರಡು ಗ್ರಾಮಗಳ ನಡುವೆ ಸೇತುವೆ ನಿರ್ಮಿಸಲು ಹೇಗಾದರೂ ಮಾಡಿ ಹಣ ಹೊಂದಿಸಿಕೊಡುವುದಾಗಿ ಹೇಳಿದರು.ಸಭಾಪತಿ ಅವರು ಸದಸ್ಯರ ಒತ್ತಾಯದಂತೆ ಮಳೆಗಾಲ ಶುರುವಾಗುವ ಜೂನ್ ಮೊದಲು ಸೇತುವೆ ನಿರ್ಮಿಸಿಕೊಡಿ ಎಂದು ಸೂಚಿಸಿದರು.
