ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ನ.26-27 ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ

ಹಾಸನ :ಸುಗ್ರೀವಾಜ್ಙೆ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರೈತ ವಿರೋಧಿ ಎಪಿಎಂಸಿ ಹಾಗೂ ಭೂಸುಧಾರಣೆ ಕಾಯ್ದೆ ಜಾರಿ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ನ.26-27 ರಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯದ ರೈತರು ಭಾಗವಹಿಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ಎರಡು ದಿನ ನಡೆಯುವ ಬೃಹತ್ ಪ್ರತಿಭಟನೆ ರ್ಯಾಲಿ ರಾಮಲೀಲಾ ರಸ್ತೆ ಮೂಲಕ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ವರೆಗೆ ಸಾಗಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯದಿಂದಲೂ ಸಹ ನೂರಾರು ರೈತರು ತೆರಳಲಿದ್ದಾರೆ ಕಳೆದ ಬಾರಿ 5 ಸಾವಿರ ರೈತರು ಪ್ರತಿಭಟನೆಗೆ ರೈಲು ಮೂಲಕ ತೆರಳಿದ್ದೆವು.. ಹವಾಮಾನ ವೈಪರೀತ್ಯ ಹಾಗೂ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ನ.20 ರ ನಂತರ ಪರಿಸ್ಥಿತಿ ಅವಲೋಕಿಸಿ ಎಷ್ಟು ರೈತರು ದೆಹಲಿಯಲ್ಲಿ ಭಾಗವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಯನ್ನು ಬೈಪಾಸ್ ಬಿಲ್‌ಅನ್ನಾಗಿ ಪರಿವರ್ತನೆ ಮಾಡಿ ಜಾರಿಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದೆ . ಇದೊಂದು ಕೃಷಿ ವಲಯಕ್ಕೆ ದೊಡ್ಡ ಗಂಡಾಂತರ ತರಲಿದ್ದು ಇದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು; ಕಾಯ್ದೆ ಜಾರಿ ಸಂಬಂಧ ಈಗಾಗಲೇ ಲೋಕಸಭೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ವಿಧಾನಪರಿಷತ್ತಿನಲ್ಲಿ ಅಂಗೀಕಾರ ಬಾಕಿ ಇದೆ ಆದರೆ ವಿಧಾನಪರಿಷತ್ ಚುನಾವಣೆ ಮುಗಿದಿದ್ದು ಇಲ್ಲಿಯೂ ಸಹ ಕಾಯ್ದೆ ಅಂಗೀಕಾರವಾಗಲಿದೆ ಈ ಮೂಲಕ ರೈತರಿಗೆ ಅನ್ಯಾಯ ವಾಗುವುದರಲ್ಲಿ ಸಂಶಯವಿಲ್ಲ ಎಂದರು.

ರೈತರ ಹಾಗೂ ರೈತರ ಉದ್ದಾರಕ್ಕಾಗಿ ಸರ್ಕಾರ ರಚನೆ ಮಾಡಲಾಗಿದೆ ಎಂದು ಮೂದಿ ಅಧಿಕಾರಕ್ಕೆ ಬಂದು ಕಾರ್ಪೊರೇಟ್ ವಲಯಕ್ಕೆ ಮಣೆಹಾಕುತ್ತಿದ್ದಾರೆ..ಇಂತಹ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆಂದು ದೂರಿದರು .

ಪಂಜಾಬ್‌ ನ ಮುಖ್ಯಮಂತ್ರಿ ರೈತ ವಿರೋಧಿಯಾದ ಯಾವುದೇ ಕಾಯ್ದೆಯನ್ನು ಕೇಂದ್ರ ಸರ್ಕಾರ ಹೇರಿದರೆ ಅದನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ ಇದನ್ನು ಸಮರ್ಥಿಸಿಕೊಂಡಿರುವ ರಾಜಸ್ಥಾನ ಸರ್ಕಾರ ಕೂಡ ಆ ರಾಜ್ಯದಲ್ಲಿ ಕಾಯ್ದೆ ಜಾರಿಗೆ ಒಪ್ಪಿರುವುದಿಲ್ಲ ಆದರೆ ಕರ್ನಾಟಕದಲ್ಲಿ ಕಾಯ್ದೆಯನ್ನು ಜಾರಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಈಗಾಗಲೇ ರೈಲ್ವೆ,ವಿದ್ಯುತ್, ಪೆಟ್ರೋಲಿಯಂ, ಜೀವ ವಿಮೆ ಸೇರಿದಂತೆ ಹಲವು ವಲಯಗಳನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ವಹಿಸಲಾಗಿದೆ ಇದೀಗ ಕೃಷಿ ವಲಯವಾದ ಎಪಿಎಂಸಿ – ಭೂಸುಧಾರಣಾ ಕಾಯಿದೆ ತಿದ್ದುಪಡಿ ಮಾಡುವ ಮೂಲಕ ಜಾರಿಗೆ ಮಾಡುವ ಕ್ರಮ ಇದೇ ರೀತಿ ಮುಂದುವರೆದರೆ ದೇಶದ ರೈತರು ಹಾಗೂ ಸಾರ್ವಜನಿಕ ವಲಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಆದ್ದರಿಂದ ಕಾಯಿದೆ ಹಿಂಪಡೆಯಲು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಾಬು ಸೇರಿದಂತೆ ಇತರರು ಇದ್ದರು.

Sri Raghav

Admin