ಕೋಲಾರದಲ್ಲಿರುವ ಬೆಮೆಲ್ ಕಾರ್ಖಾನೆ ಖಾಸಗೀಕರಣವಿಲ್ಲ : ನಿರಾಣಿ

Social Share

ಬೆಂಗಳೂರು,ಮಾ.8- ಕೋಲಾರದಲ್ಲಿರುವ ಬಿಇಎಂಎಲ್ (ಬೆಮೆಲ್)ಕಾರ್ಖಾನೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಿಲ್ಲ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.  ವಿಧಾನಪರಿಷತ್‍ನಲ್ಲಿ ಜೆಡಿಎಸ್‍ನ ಸದಸ್ಯ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು. ಬಿಇಎಂಎಲ್‍ನಲ್ಲಿ 1149 ಎಕರೆ ಭೂಮಿ ಇದೆ. ಈ ಮೊದಲು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ 979 ಎಕರೆಯನ್ನು ಬೆಮೆಲ್‍ಗೆ ನೀಡಿದ್ದು, ಅದು ಬಳಕೆಯಾಗಿ ತಟಸ್ಥವಾಗಿರುವುದರಿಂದ ಹಿಂಪಡೆದು ಅಲ್ಲಿ ಖಾಸಗಿ ಕೈಗಾರಿಕೆಗಳ ಸ್ಥಾಪೆನೆಗೆ ಅವಕಾಶ ಮಾಡಿಕೊಡಲಾಗುವುದು. ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಎಸ್ಸಿ-ಎಸ್ಟಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬೆಮೆಲ್ ಕಾರ್ಖಾನೆಯನ್ನು ಮುಚ್ಚುವುದಿಲ್ಲ. ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲಾಗುತ್ತದೆ. ಕಾರ್ಖಾನಗೆ ಅಗತ್ಯದಷ್ಟು ಸಿಬ್ಬಂದಿ ಮತ್ತು ಭೂಮಿಯನ್ನು ಉಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರದ ಸಂಸದೀಯ ಆರ್ಥಿಕ ಸಮಿತಿ 2016ರಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರಿ ಸೌಮ್ಯದ ಕಾರ್ಖಾನೆಗಳಿಂದ ಬಂಡವಾಳ ಹಿಂತೆಗೆತಕ್ಕೆ ತೀರ್ಮಾನಿಸಿದೆ. ಹೀಗಾಗಿ ಹಂತ ಹಂತವಾಗಿ ಸರ್ಕಾರಿ ಕಾರ್ಖಾನೆ ಬಂಡವಾಳವನ್ನು ವಾಪಸ್ ತೆಗೆಯಲಾಗುವುದು. ಬೆಮೆಲ್‍ನಲ್ಲಿ ಪ್ರಸ್ತುತ ಶೇ.47ರಷ್ಟು ಬಂಡವಾಳ ಇದೆ. ಅದನ್ನು ಸದ್ಯಕ್ಕೆ ಮುಂದುವರೆಸಲಾಗುತ್ತದೆ ಎಂದರು.
ಈ ಹಿಂದೆ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಾಗ ಮುಖ್ಯಂಮತ್ರಿಯಾಗಿದ್ದ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಆರ್ಥಿಕ ಸಚಿವೆ ನಿರ್ಮಲಾಸೀತಾರಾಮನ್ ಮತ್ತು ಇತರರು ಬಂಡವಾಳ ಹಿಂತೆಗೆ ಅನಿವಾರ್ಯ ಎಂದಿದ್ದಾರೆ. ಹೀಗಾಗಿ ಸರ್ಕಾರ ಕಾರ್ಖಾನೆಗಳನ್ನು ನಡೆಸುವುದಕ್ಕಿಂತ ಖಾಸಗಿಯವರಿಗೆ ನೀಡುವುದ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ ಎಂದು ತಿಳಿಸಿದರು.
ಕೋಲಾರದ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಕೆಜಿಎಫ್‍ನಲ್ಲಿ 16 ಎಕರೆ ಭೂಮಿ ಇದ್ದು, ಅದರಲ್ಲಿ ಮೊದಲ ಹಂತದಲ್ಲಿ 3500 ಎಕರೆಯನ್ನು ಕೈಗಾರಿಕಾ ಇಲಾಖೆ ತನ್ನ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಮತ್ತೊಮ್ಮೆ ಆ ಭಾಗದಲ್ಲಿ ಡ್ರೋಣ್ ಸರ್ವೆ ನಡೆಸಲಾಗಿದ್ದು, ಎರಡು ದಿನಗಳಲ್ಲಿ ಕೇಂದ್ರ ಸಚಿವರಿಗೆ ವರದಿಯನ್ನು ಸಲ್ಲಿಸಲಾಗುತ್ತದೆ. ಇದೇ 10ರಂದು ಕೇಂದ್ರ ಗಣಿ ಸಚಿವರು ನಮಗೆ ಸಮಯ ನೀಡಿದ್ದು, ಅಂದು ಚರ್ಚೆ ಮಾಡುತ್ತಿದ್ದೇವೆ. ಕೆಜಿಎಫ್‍ನಲ್ಲಿ ಬಾಕಿ ಇರುವ 12 ಸಾವಿರ ಎಕರೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡು ಅಭಿವೃದ್ಧಿ ಮಾಡಬೇಕು ಎಂದಿದೆ. ಈ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಿದರು.
ಕಾರ್ಖಾನೆಗಳ ಬಳಿಯೇ ಜನವಸತಿ ಪ್ರದೇಶಗಳಿಗೆ ಉಪನಗರಗಳನ್ನು ನಿರ್ಮಿಸಲು ಸರ್ಕಾರ ಅನುಕೂಲ ಕಲ್ಪಿಸಿಕೊಡುತ್ತಿದೆ. ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ.85ರಷ್ಟನ್ನು ಕೈಗಾರಿಕೆಗಳಿಗೆ. ಉಳಿದ ಪ್ರದೇಶದಲ್ಲಿ ಜನ ವಸತಿ ನಿರ್ಮಿಸಿ ವಾಕ್ ಫಾರ್ ವರ್ಕ್ ಕಲ್ಪನೆಯನ್ನು ಜಾರಿಗೆ ತರಲಾಗುವುದು ಎಂದರು.
ಈ ವೇಳೆ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಪೂರ್ವಜರು ಸ್ಥಾಪಿಸಿದ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸುವುದು ಸರಿಯಲ್ಲ. ಸಂಪತ್ತು ಕೆಲವೇ ವ್ಯಕ್ತಿಗಳ ಬಳಿ ಕ್ರೂಢೀಕರಣವಾಗುತ್ತಿದೆ. ಖಾಸಗಿಯವರಿಗೆ ಲಾಭ ಮಾಡುವುದಷ್ಟೇ ಉದ್ದೇಶ. ಸಾಮಾಜಿಕ ಬದ್ಧತೆ ಇರುವುದಿಲ್ಲ. ಹೀಗಾಗಿ ಸರ್ಕಾರ ಖಾಸಗಿ ಕರಣಕ್ಕೆ ಒತ್ತು ನೀಡಬಾರದು ಎಂದು ಆಗ್ರಹಿಸಿದರು.
ಈ ವಿಷಯವಾಗಿ ಸದಸ್ಯರಾದ ಅನಿಲ್‍ಕುಮಾರ್ ಹಾಗೂ ಇತರರು ಚರ್ಚೆಗೆ ಆಸಕ್ತಿ ತೋರಿಸಿದರು. ವಿಷಯ ವಿಸ್ತೃತವಾಗಿದ್ದರಿಂದ ಅರ್ಧಗಂಟೆಗಳ ಕಾಲ ಅವಕಾಶ ನೀಡುವುದಾಗಿ ಸಭಾಪತಿ ಭರವಸೆ ನೀಡಿದರು.

Articles You Might Like

Share This Article