ಹೆತ್ತ ಮಗುವನ್ನೇ ಕತ್ತು ಹಿಸುಕಿ ಕೊಂದ ತಾಯಿ..!

ಕೊಪ್ಪಳ,ಸೆ.10- ಗಂಡನ ಮೇಲಿನ ಸಿಟ್ಟಿಗೆ ತಾಯಿಯೊಬ್ಬಳು ತನ್ನ 16 ತಿಂಗಳ ಹಸುಗೂಸಿನ ಕತ್ತು ಹಿಸುಕಿ ಕೊಂದಿರುವ ಅಮಾನುಷ ಕೃತ್ಯವೊಂದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ. ಅಭಿನವ ಕೊಲೆಗೀಡಾದ ಮಗು. ಕವಿತಾ ಅಲಿಯಾನ್ ಪ್ರತಿಮಾ (24) ಮಗುವನ್ನೇ ಕೊಂದ ತಾಯಿ.

ಕವಿತಾ ನಾಲ್ಕು ವರ್ಷದ ಹಿಂದೆ ಶಶಿ ಎಂಬಾತನನ್ನು ಮದುವೆಯಾಗಿದ್ದರು. ಇವರಿಗೆ ಒಂದೂವರೆ ವರ್ಷದ ಹಿಂದೆ ಮಗು ಆಗಿತ್ತು. ಪೆಟ್ರೋಲ್ ಬಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಗಂಡ ಶಶಿ ದುಡಿದ ಹಣವನ್ನು ಮನೆಗೆ ಕೊಡುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಮಹಿಳೆ ಎರಡು ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿದ್ದಳು.

ಆದರೆ, ನಿನ್ನೆ ಗಂಡ ಪೆಟ್ರೋಲ್ ಬಂಕ್‍ಗೆ ಕೆಲಸಕ್ಕೆಂದು ತೆರಳಿದ್ದ ವೇಳೆ ತನ್ನದೇ ಹಸುಗೂಸನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೆ, ಬೆಳಗ್ಗೆಯೇ ಕೊಲೆ ಮಾಡಿದ್ದರೂ ಮಗು ಮೃತಪಟ್ಟಿರುವ ವಿಚಾರವನ್ನು ಯಾರಿಗೂ ತಿಳಿಸದೆ ಕಣ್ಣೀರೂ ಹಾಕದೆ ಇಡೀ ದಿನ ಶವದ ಜೊತೆ ಮನೆಯಲ್ಲೇ ಕುಳಿತಿದ್ದಾಳೆ.

ಗಂಡ ಶಶಿ ಮನೆಗೆ ಬಂದಾಗ ಮಗು ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾನೆ. ತದನಂತರ ವಿಚಾರ ಬೆಳಕಿಗೆ ಬಂದಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.