ದಾಖಲೆ ಕಳ್ಳರ ರಕ್ಷಣೆಗೆ ನಿಂತ ಎಸಿ, ತಹಸೀಲ್ದಾರ್: ಸುಧೀರ್ ಮುರೊಳ್ಳಿ ಗಂಭೀರ ಆರೋಪ

Spread the love

ಕೊಪ್ಪ, ಫೆ.4- ತಾಲ್ಲೂಕು ಕಚೇರಿಯ ಕಡತಗಳನ್ನು ಬಚ್ಚಿಟ್ಟುಕೊಂಡು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಎಂಬುವವರನ್ನು ಕೊಪ್ಪ ತಹಸೀಲ್ದಾರ್ ಪರಮೇಶ್ ಹಾಗೂ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎನ್.ನಾಗರಾಜ್ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು  ಆರೋಪಿಸಿರುವ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭಾರೀ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸುಧೀರ್ ಕುಮಾರ್ ಮುರೊಳ್ಳಿ , ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಇನೇಶ್, ನುಗ್ಗಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಈ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪ ತಹಸೀಲ್ದಾರ್ ಕಚೇರಿಯಲ್ಲಿ ಈ ಹಿಂದೆ ರೈತರು ಹಾಗೂ ಬಡವರ ಫಾರಂ-50, 53 ಕಡತಗಳ ಉಸ್ತುವಾಗಿಯಾಗಿದ್ದ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಸುಮಾರು 300ಕ್ಕಿಂತ ಹೆಚ್ಚು ಕಡತಗಳನ್ನು ದುರುದ್ದೇಶದಿಂದ ಬಚ್ಚಿಟ್ಟುಕೊಂಡು ಹಣ ಕೊಟ್ಟವರ ಕಡತಗಳನ್ನಷ್ಟೇ ಭೂ ಮಂಜೂರಾತಿ ಪ್ರಕ್ರಿಯೆ ಪ್ರಸ್ತಾವನೆಗೆ ಸಲ್ಲಿಸುತ್ತಿದ್ದ.

ಈತನ ವರ್ಗಾವಣೆ ಸಂದರ್ಭದಲ್ಲೂ ಕಡತಗಳನ್ನು ಹಸ್ತಾಂತರಿಸದೆ ಗಂಭೀರ ಕರ್ತವ್ಯಲೋಪವೆಸಗಿರುವು ದಲ್ಲದೆ ಪ್ರಭಾರ ವಹಿಸಿಕೊಡುವ ಪ್ರಕ್ರಿಯೆಯಲ್ಲೂ ಲೋಪವೆಸಗಿದ್ದಾನೆ. ಕೊಪ್ಪಕ್ಕೆ ಕರ್ತವ್ಯಕ್ಕೆ ಬರುವ ಮುನ್ನವೇ ಈತ ಅಮಾನತುಗೊಂಡಿದ್ದ.

ಕಳೆದ ಸಾಲಿನ ಮಾರ್ಚ್‍ನಲ್ಲಿ ಶಾಸಕರ ನೇತೃತ್ವದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಂದಾಯ ಇಲಾಖೆಗೆ ಸೂಚಿಸಲಾಗಿತ್ತು.

ಈತನನ್ನು ಶೃಂಗೇರಿ ತಾಲ್ಲೂಕು ಕಚೇರಿಗೆ ವರ್ಗಾಯಿಸಿದ್ದು, ಶೃಂಗೇರಿ ತಾಲ್ಲೂಕು ಕಚೇರಿಯ ಕಡತ ನಾಶ ಹಾಗೂ ಇತರ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ. ಇತ್ತೀಚೆಗೆ ಶೃಂಗೇರಿಯಿಂದ ಚಿಕ್ಕಮಗಳೂರು ಕಂದಾಯ ಇಲಾಖೆಯ ಕೇಂದ್ರ ಸ್ಥಾನಕ್ಕೆ ವರ್ಗಾಯಿಸಿದ್ದು, ಅಲ್ಲಿಯೂ ಕೂಡ ಇವರ ಆಟಾಟೋಪ ಮುಂದುವರೆದಿದೆ.

ಇಷ್ಟೆಲ್ಲ ಗಂಭೀರ ಆರೋಪಗಳಿದ್ದರೂ ತಹಸೀಲ್ದಾರರಾಗಲಿ, ಉಪವಿಭಾಗಾಧಿಕಾರಿಗಳಾಗಲಿ ಈತನ ಮೇಲೆ ಯಾವುದೇ ರೀತಿಯ ಕ್ರಮ ಜರುಗಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಕ್ಷಣವೇ ಪ್ರಕಾಶ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಡತಗಳಿಲ್ಲದೆ ರೈತರು ಮತ್ತು ಕೃಷಿಕರಿಗೆ ಅರ್ಜಿ ರಿಜಿಸ್ಟರ್ ಆಧಾರದಲ್ಲಿ ಕಡತ ತಯಾರಿಸಲು ಸೂಕ್ತ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಈ ಬಗ್ಗೆ ಜನಜಾಗೃತಿ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಶೃಂಗೇರಿ ಕ್ಷೇತ್ರದ ಕಾರ್ಯಾಧ್ಯಕ್ಷನವೀನ್ ಕರುವಾನೆ, ಕೊಪ್ಪ ಪಟ್ಟಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಜಯ್‍ಕುಮಾರ್, ಕೊಪ್ಪ ಪಟ್ಟಣ ಪಂಚಾಯಿತಿ ಸದಸ್ಯ ರಶೀದ್ ಸೇರಿದಂತೆ ಹಲವು ಮುಖಂಡರು ಒತ್ತಾಯಿಸಿದ್ದಾರೆ.

Facebook Comments