ಅನಾವಶ್ಯಕ ಬೀದಿಗೆ ಬಂದವರಿಗೆ ಗೋಣಿಚೀಲದ ಉಡುಪು ತೊಡಿಸಿದ ಪೊಲೀಸರು..!

ಕೊಪ್ಪಳ, ಏ.24- ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬರಬೇಡಿ ಎಂದು ಎಷ್ಟೇ ಬೊಬ್ಬೆ ಹೊಡೆದುಕೊಂಡರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ. ಮನೆಯೊಳಗೆ ಇರಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೆಲವರು ಮಾತ್ರ ಸಿಕ್ಕಿದ್ದೇ ಅವಕಾಶ ಎಂದು ಬೀದಿ ಬೀದಿ ತಿರುಗುತ್ತಲೇ ಇದ್ದಾರೆ.

ಇಂತಹ ಬೀದಿ ತಿರುಕರಿಗೆ ಕೊಪ್ಪಳ ಪೊಲೀಸರು ಸರಿಯಾದ ಶಾಸ್ತಿ ಮಾಡಿದ್ದಾರೆ. ನಗರದ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಬೈಕ್ ಸವಾರರಿಗೆ ಕೊಪ್ಪಳ ನಗರ ಠಾಣೆಯ ಸಿಪಿಐ ಮೌನೇಶ್ ಪಾಟೀಲ್ ಅವರು ವಿನೂತನವಾಗಿ ಗೋಣಿಚೀಲ ತೊಡಿಸುವ ಮೂಲಕ ಜಾಗೃತಿ ಮೂಡಿಸಿದರು.

ಗೋಣಿ ಚೀಲ ತೋಡಿಸಿದ ವ್ಯಕ್ತಿಗಳನ್ನು ನಗರದ ರಸ್ತೆಗಳು ಮತ್ತು ವೃತ್ತಗಳಲ್ಲಿ ನಿಲ್ಲಿಸಿ ಅವರ ಮೂಲಕ ಸಾರ್ವಜನಿಕರಿಗೆ ದಯಮಾಡಿ ಮನೆಯಿಂದ ಹೊರಬರಬೇಡಿ ಎಂಬ ಬಗ್ಗೆ ಜಾಗೃತಿ ಮೂಡಿಸಿದರು. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ವೈದ್ಯರು, ಆರೋಗ್ಯ ಇಲಾಖೆಯರು ಪಿಪಿಇ ಕಿಟ್ ಹಾಗೂ ಮಾಸ್ಕ ಗಳನ್ನು ಧರಿಸಿ 8 ತಾಸು ಕೆಲಸ ಮಾಡುತ್ತಾರೆ.

ಅವರ ಶ್ರಮ ಎಲ್ಲರಿಗೂ ಮಾದರಿ. ಆದರೆ, ಕೆಲವರು ಅನಗತ್ಯ ಬೀದಿಗಿಳಿಯುತ್ತಿದ್ದಾರೆ. ಅಂತಹವರನ್ನೇ ಬಳಕೆ ಮಾಡಿಕೊಂಡು ರಸ್ತೆಗಿಳಿಯದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮೌನೇಶ್‍ಪಾಟೀಲ್ ತಿಳಿಸಿದ್ದಾರೆ.

Sri Raghav

Admin