ಕೆಂಪೇಗೌಡರ ಕನಸು ಸಾಕಾರಕ್ಕೆ ಸಂಕಲ್ಪ : ಸಿಎಂ ಬಿಎಸ್‍ವೈ

ಬೆಂಗಳೂರು, ಮಾ.25- ಬಿಬಿಎಂಪಿಯು ನಗರದ ಕೆಆರ್ ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಗೆ ಹರಿಯುವ ಕೋರಮಂಗಲ ಕಣಿವೆ (ಕೆ-100) ಜಲಮಾರ್ಗವನ್ನು 10 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಾಂತಿನಗರ ಬಸ್ ನಿಲ್ದಾಣದ ಸಮೀಪ ಬಿಬಿಎಂಪಿಯಿಂದ ಆಯೋಜಿಸಿದ್ದ ಜಲಮಾರ್ಗ ಯೋಜನೆಗೆ ಅಭಿವೃದ್ಧಿಪಡಿಸಿರುವ ಮತ್ತು ಸೌಂದರ್ಯೀಕರಣಗೊಳಿಸುವ ಯೋಜನೆಗೆ ಶಂಕುಸ್ಥಾಪನೆ ಮತ್ತು ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಯೋಜನೆಯು ಪೂರ್ಣಗೊಂಡರೆ ಬೆಂಗಳೂರಿನ ಅಭಿವೃದ್ಧಿ ಚಿತ್ರಣವೇ ಬದ ಲಾಗಲಿದೆ.

ನಿಮಗೆ ಹಣಕಾಸಿನ ತೊಂದರೆ ಎದುರಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಆದರೆ, 10 ತಿಂಗಳೊಳಗೆ ಯಾವುದೇ ಸಬೂಬು ಹೇಳದೆ ಕಾಮಗಾರಿ ಪೂರ್ಣಗೊಳ್ಳಬೇಕೆಂದು ತಾಕೀತು ಮಾಡಿದರು.ಯೋಜನೆಗೆ ಒಟ್ಟು 175 ಕೋಟಿ ಖರ್ಚಾಗಲಿದೆ. ಗುತ್ತಿಗೆದಾರರು ಕಾರಣಗಳನ್ನು ನೀಡದೆ ಕಾಲಮಿತಿಯೊಳಗೆ ಕಾಮಗಾರಿ ಮುಗಿಸಬೇಕು. ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಥಮ ಆದ್ಯತೆ ನೀಡಿದೆ. ಜಲಮಾರ್ಗ ಯೋಜನೆ ಪೂರ್ಣಗೊಂಡರೆ ನಗರಕ್ಕೆ ಮತ್ತೊಂದು ಗರಿ ಮೂಡಲಿದೆ ಎಂದು ಪ್ರಶಂಸಿಸಿದರು.

ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಅನೇಕ ರೀತಿಯ ನೆರವು ನೀಡಿದೆ. ರಾಜಕಾಲುವೆಗಳ ಅಭಿವೃದ್ಧಿ, ರಸ್ತೆ ಅಗಲೀಕರಣ, ಸುಗಮ ಸಂಚಾರ, ಮೂಲಭೂತ ಸೌಕರ್ಯಗಳಿಗೆ ಆದ್ಯತೆ, ಉತ್ತಮ ಜೀವನ ನಿರ್ವಹಣೆಗಾಗಿ ಉದ್ಯಾನವನಗಳ ಅಭಿವೃದ್ಧಿ, ಮಿಷನ್-2025 ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಬೆಂಗಳೂರು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಬಿಡುಗಡೆ ಮಾಡಿರುವ 10 ಲಕ್ಷಕ್ಕಿಂತ ಹೆಚ್ಚು ಜನರಿರುವ ನಗರಗಳಲ್ಲಿ ಉತ್ತಮ ಜೀವನ ನಿರ್ವಹಣೆ ಮಾಡುವ ನಗರಗಳಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಗಮ ಸಂಚಾರಕ್ಕಾಗಿ ನಾವು ರಸ್ತೆಗಳನ್ನು ಅಗಲೀಕರಣ ಮಾಡಿದ್ದೇವೆ. ನಗರಾಭಿವೃದ್ಧಿ ಇಲಾಖೆಯಿಂದ ಪಾದಚಾರಿ ಮಾರ್ಗ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾಗಿ ಹೇಳಿದರು. ಬೆಂಗಳೂರು ಕೇವಲ ಸಿಲಿಕಾನ್ ಸಿಟಿಯಾಗದೆ ಇಂದು ಉದ್ಯಮಿಗಳ ರಾಜಧಾನಿಯಾಗಿದೆ. ಇಲ್ಲಿ ಉದ್ಯೋಗವನ್ನರಸಿ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ವಲಸೆ ಬರುತ್ತಾರೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಕನಸನ್ನು ನನಸು ಮಾಡುವುದು ನಮ್ಮ ಉದ್ದೇಶ ಎಂದರು.

ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ನಾನಾ ರೀತಿಯ ಯೋಜನೆಗಳನ್ನು ರೂಪಿಸಿದೆ. ವಿಶ್ವದರ್ಜೆಯ ಈ ನಗರವನ್ನು ಇನ್ನಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಉದಯ್ ಗರುಡಾಚಾರ್, ಕೆಎಸ್‍ಆರ್‍ಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.