ರಿಲೀಸ್ ಆಗದ ಕೋಟಿಗೊಬ್ಬ-3 ಚಿತ್ರ, ಅಭಿಮಾನಿಗಳ ಆಕ್ರೋಶ..!

ಬೆಂಗಳೂರು,ಅ.14- ಲಾಕ್‍ಡೌನ್ ಬಳಿಕ ಚಲನಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿದ್ದು, ಬಿಗ್ ಬಜೆಟ್‍ನ ಕೋಟಿಗೊಬ್ಬ-3 ಇಂದು ಬಿಡುಗಡೆಯಾಗಬೇಕಿತ್ತು. ಇಂದು ಬೆಳಗ್ಗೆ ರಾಜ್ಯದ ಹಲವಾರು ಥಿಯೇಟರ್‍ಗಳಲ್ಲಿ ಚಿತ್ರ ಬಿಡುಗಡೆಗೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಅಭಿಮಾನಿಗಳು ಗದ್ದಲ ಎಬ್ಬಿಸಿದ್ದಾರೆ.

ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗುತ್ತದೆ ಎಂದು ಸುದೀಪ್ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಇಂದು ಫ್ಯಾನ್ಸ್ ಶೋ ಕೂಡ ಆಯೋಜನೆ ಮಾಡಲಾಗಿತ್ತು. ಕಾರಣಾಂತರಗಳಿಂದ ಶೋ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಚಿತ್ರಮಂದಿರ ಮಾಲೀಕರು ಮತ್ತುವಿತರಕರ ಜೊತೆ ಸಿಟ್ಟಿಗೆದ್ದಿದ್ದಾರೆ.

ಕೋವಿಡ್ ಕಾರಣಗಳಿಂದ ಎರಡು ವರ್ಷಗಳ ನಂತರ ಚಿತ್ರಮಂದಿರಗಳು ತೆರೆದಿವೆ. ಈ ಹಿನ್ನೆಲೆಯಲ್ಲಿ ಚಿತ್ರಾಭಿಮಾನಿಗಳು ಕಾದು ಕುಳಿತಿದ್ದು, ಸದ್ಯ ಮೊದಲ ದಿನದ ಶೋ ಈ ರೀತಿ ರದ್ದಾಗಿರುವುದು ಅಭಿಮಾನಿಗಳಿಗೆ ತುಂಬಾ ನೋವು ತರಿಸಿದೆ.ಬೆಳಗ್ಗೆ 7 ಗಂಟೆಯ ಪ್ರದರ್ಶನಕ್ಕೆ ನಿನ್ನೆಯೇ ಟಿಕೆಟ್‍ಗಳು ಸೋಲ್ಡ್‍ಔಟ್ ಆಗಿದ್ದವು. ಹಾಗಾಗಿ ಅಭಿಮಾನಿಗಳು ಮುಂಜಾನೆಯೇ ಥಿಯೇಟರ್ ಮುಂದೆ ಜಮಾಯಿಸಿದ್ದರು. ತಾಂತ್ರಿಕ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಲಿಲ್ಲ.

10 ಗಂಟೆಗೆ ಪ್ರದರ್ಶನ ಏರ್ಪಡಿಸುವುದಾಗಿ ಚಿತ್ರ ತಂಡ ಸಮಾಜಾಯಿಷಿ ಮಾಡಿತು. ಆದರೆ ಬಹಳ ನಿರೀಕ್ಷೆಯಿಂದ ಥಿಯೇಟರ್‍ಗೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಕೆಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಅಭಿನಯ ಚಕ್ರವತಿ ಸುದೀಪ್ ಅಭಿಮಾನಿಗಳನ್ನು ಚಿತ್ರ ತಂಡ ಸಮಾಧಾನಪಡಿಸಿದ್ದು, ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದೆ.ಕನ್ನಡ ಚಿತ್ರರಂಗ ಹಂತ ಹಂತವಾಗಿ ಸುಧಾರಣೆ ಕಾಣುತ್ತಿತ್ತು. ಲಾಕ್‍ಡೌನ್ ಇಕ್ಕಟ್ಟಿನಿಂದ ಪಾರಾಗುವ ಮುನ್ಸೂಚನೆಗಳಿವೆ. ದುನಿಯಾ ವಿಜಿ ಅವರ ಸಲಗ ಚಿತ್ರ ಕೂಡ ಇಂದು ಬಿಡುಗಡೆಯಾಗಿದೆ.

# ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ :
ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಮೊದಲ ಶೋ ವಿಳಂಬವಾಗಿದ್ದಕ್ಕೆ ನಟ ತನ್ನ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಚ್ಚ, ಕೆಲವೊಂದು ವಿಚಾರಗಳಿಂದ ಸಿನಿಮಾದ ಮೊದಲ ಶೋ ವಿಳಂಬವಾಗಿದೆ. ಈ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ನಾನು ವೈಯಕ್ತಿವಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಥಿಯೇಟರ್ ಮಾಲೀಕ ತಪ್ಪಿಲ್ಲ. ಹೀಗಾಗಿ ಅಲ್ಲಿ ಅಹಿತರ ಘಟನೆಗಳನ್ನು ನಡೆಸಬೇಡಿ. ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ.

ಇದು ಅತ್ಯಂತ ವಿಚಿತ್ರ ಸನ್ನಿವೇಶವಾಗಿದೆ. ನಿರ್ಲಕ್ಷ್ಯಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅಭಿಮಾನಿಗಳು ಕೆಟ್ಟ ರೀತಿಯಲ್ಲಿ ವರ್ತಿಸಬಾರದು. ಸಿನಿಮಾ ಬಿಡಗಡೆಯ ಸಮಯವನ್ನು ನಾನೇ ನೀಡುವೆ, ಕೆಲ ಸಮಸ್ಯೆಗಳಿಂದ ರಿಲೀಸ್ ವಿಳಂಬವಾಗಿದೆ ಎಂದು ಹೇಳಿದ್ದಾರೆ.