ಕೆಪಿಸಿಸಿಗೆ ‘ಪವರ್’ ಹೆಚ್ಚಿಸಲು ಡಿಕೆಶಿ ತಯಾರಿ

Spread the love

ಬೆಂಗಳೂರು, ಡಿ. 1- ಸರಿಸುಮಾರು ಒಂದೂವರೆ ವರ್ಷಗಳ ನಂತರ ಕೆಪಿಸಿಸಿಗೆ ಪದಾಧಿಕಾರಿಗಳನ್ನು ನೇಮಿಸಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಯಾರಿ ನಡೆಸಿದ್ದಾರೆ. 2019ರ ಜೂನ್ 19ರಂದು ಕೆಪಿಸಿಸಿಯ ಎಲ್ಲಾ ಪದಾಧಿಕಾರಿಗಳನ್ನು ಕೈ ಬಿಡಲಾಗಿತ್ತು.

ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ ಹೊರತು ಪಡಿಸಿ ಉಳಿದೆಲ್ಲರೂ ಅಧಿಕಾರ ಕಳೆದುಕೊಂಡಿದ್ದರು. ಅಂದಿನಿಂದ ಈವರೆಗೂ ಕೆಪಿಸಿಸಿಗೆ ನೂತನ ಪದಾಧಿಕಾರಿಗಳು ನೇಮಕವಾಗಿಲ್ಲ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ಉದ್ದೇಶದಿಂದ ಆ ಸಂದರ್ಭದಲ್ಲಿದ್ದ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ದಿನೇಶ್‍ಗುಂಡೂರಾವ್ ಪ್ರಯತ್ನಿಸಿದ್ದರು. ಆದರೆ ಯಾರನ್ನೇ ಕೈ ಬಿಡಲು ಮುಂದಾದರೂ ಅದಕ್ಕೆ ವಿರೋಧ ವ್ಯಕ್ತವಾಗುತ್ತಿತ್ತು.

ಹಿರಿಯ ನಾಯಕರ ಮೊರೆ ಹೋಗುತ್ತಿದ್ದ ಪದಾಧಿಕಾರಿಗಳು. ತಮ್ಮನ್ನು ತುಳಿಯಲಾಗುತ್ತಿದೆ ಎಂದು ದೂರು ನೀಡುತ್ತಿದ್ದರು. ಹೀಗಾಗಿ ಯಾರನ್ನೂ ಬದಲಾವಣೆ ಮಾಡಲಾಗದೆ ಕೆಲಸ ಮಾಡದೇ ಇರುವವರನ್ನು ಸಹಿಸಿಕೊಳ್ಳಲಾಗದೆ ದಿನೇಶ್‍ಗುಂಡೂರಾವ್ ಗೊಂದಲದಲ್ಲಿದ್ದರು.

ಆ ವೇಳೆ ಹಿರಿಯ ನಾಯಕರ ಸಲಹೆ ಮೇರೆಗೆ ಸಂಪುರ್ಣವಾಗಿ ಕೆಪಿಸಿಸಿ ಘಟಕವನ್ನೇ ವಿಸರ್ಜನೆ ಮಾಡಲಾಯಿತು. ತಕ್ಷಣವೇ ಹೊಸ ಪದಾಧಿಕಾರಿಗಳನ್ನು ನೇಮಿಸಿ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಅಧ್ಯಕ್ಷರು ಮುಂದಾಗಿದ್ದರು. ಅಷ್ಟರಲ್ಲಿ ರಾಜಕೀಯ ಬೆಳೆವಣಿಗೆಗಳಾದವು.

ಕಾಂಗ್ರೆಸ್‍ನ ಬಂಡಾಯ ಶಾಸಕರು ಬಿಜೆಪಿ ಸೇರಿದರು. ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂತು. ಅದರ ಬೆನ್ನ ಹಿಂದೆಯೇ ಉಪ ಚುನಾವಣೆಗಳು ನಡೆದವು. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರರಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಯಿತು.

ಸೋಲಿನ ನೈತಿಕ ಹೊಣೆ ಹೊತ್ತು ದಿನೇಶ್‍ಗುಂಡೂರಾವ್ ಮತ್ತು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟರು. ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಉಳಿಸಿಕೊಂಡು ದಿನೇಶ್‍ಗುಂಡೂರಾವ್ ರಾಜೀನಾಮೆಯನ್ನು ಅಂಗೀಕಾರ ಮಾಡಿತು. ದಿನೇಶ್‍ಗುಂಡೂರಾವ್ ಬದಲಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಒಂದರ ಹಿಂದೆ ಒಂದರಂತೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸಂಘಟನೆ ಸೊರಗಿ ಹೋಗಿದೆ. ಪದಾಧಿಕಾರಿಗಳ ನೇಮಕದ ಬಗ್ಗೆ ಯಾರೂ ಗಮನ ಹರಿಸಿಲ್ಲ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಬಳಿಕ ಪದಾಧಿಕಾರಿಗಳ ನೇಮಕಕ್ಕಿಂತಲೂ ವಕ್ತಾರರನ್ನು ನೇಮಿಸಲು ಹೆಚ್ಚು ಆಸಕ್ತಿ ವಹಿಸಿದ್ದರು.

ಪದಾಧಿಕಾರಿಗಳ ನೇಮಕ ಎಂಬುದು ಗಜ ಪ್ರಸವ ಇದ್ದಂತೆ. ಆಡಳಿತಾರೂಢ ಸರ್ಕಾರ ಸಂಪುಟ ವಿಸ್ತರಣೆ ಮಾಡುವುದು ಎಷ್ಟು ಕ್ಲಿಷ್ಟಕಾರಿಯೋ ಅಷ್ಟೇ ತಲೆನೋವಿನ ವಿಚಾರ ಕಾಂಗ್ರೆಸ್ ಪದಾಧಿಕಾರಿಗಳ ನೇಮಕಾತಿ. ಅಳೆದು ತೂಗಿ ಎಲ್ಲಾ ಮುಖಂಡರನ್ನು ಸಮಾಧಾನಪಡಿಸಿ ಕ್ರೀಯಾಶೀಲರನ್ನು ಸಮಿತಿಯ ಒಳಗೆ ತೆಗೆದುಕೊಳ್ಳುವುದು ದೊಡ್ಡ ಕಸರತ್ತು ಇದ್ದಂತೆ.

ಈ ಸರ್ಕಸನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಮಾಡಿ ಮುಗಿಸಿದ್ದಾರೆ. ಸುಮಾರು 115 ಮಂದಿ ಪದಾಧಿಕಾರಿಗಳ ನೇಮಕಾತಿಗೆ ಪಟ್ಟಿ ಸಿದ್ದಪಡಿಸಿಕೊಂಡಿದ್ದಾರೆ. ಅದರಲ್ಲಿ 30 ಮಂದಿ ಪ್ರಧಾನ ಕಾರ್ಯದರ್ಶಿಗಳು, 10ರಿಂದ 15 ಮಂದಿ ಹಿರಿಯ ನಾಯಕರನ್ನೊಳಗೊಂಡ ಉಪಾಧ್ಯಕ್ಷರ ಸಮಿತಿ, ಉಳಿದಂತೆ ಸುಮಾರು 70 ಮಂದಿ ಕಾರ್ಯದರ್ಶಿಗಳ ತಂಡ ಇದೆ.

ಇತ್ತೀಚೆಗೆ ವಕ್ತಾರರಾಗಿ ನೇಮಕವಾಗಿರವವರ ಪೈಕಿ ಬಹುತೇಕರಿಗೆ ಕೆಪಿಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಪ್ರಧಾನ ಕಾರ್ಯದರ್ಶಿಗಳನ್ನು ಜಿಲ್ಲೆಗೆ ಒಬ್ಬರಂತೆ ಉಸ್ತುವಾರಿಯನ್ನಾಗಿ ನೇಮಿಸಲಾಗುತ್ತದೆ. ಕೇಡರ್ ಬೇಸ್ ಪಾರ್ಟಿಯಾಗಿ ಪರಿವರ್ತನೆಯಾಗಲಿರುವ ಕಾಂಗ್ರೆಸ್‍ಗೆ ನೂತನ ಪದಾಧಿಕಾರಿಗಳು ಯಾವ ಮಟ್ಟಿನ ಶಕ್ತಿ ತುಂಬಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments