ಬಿಗ್ ಬ್ರೇಕಿಂಗ್ : ಕೆಪಿಸಿಸಿಗೆ ಮತ್ತಿಬ್ಬರು ಕಾರ್ಯಾಧ್ಯಕ್ಷರ ನೇಮಕ..!

ಬೆಂಗಳೂರು,ಜ.22- ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ರಾಮಲಿಂಗ ರೆಡ್ಡಿ ಮತ್ತು ಧ್ರುವನಾರಾಯಣ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.

ಕಾಂಗ್ರೆಸ್‍ನಲ್ಲಿ ಕಳೆದ 40 ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡು ಸಂಘಟನೆಯಲ್ಲಿ ತಮ್ಮದೇ ಆದ ಶಕ್ತಿಯನ್ನು ಹೊಂದಿರುವ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ರಾಮಲಿಂಗ ರೆಡ್ಡಿ ಅವರಿಗೆ ಕೊನೆಗೂ ಎಐಸಿಸಿ, ಅವರ ಅನುಭವವನ್ನು ಪರಿಗಣಿಸಿ ಮಹತ್ವದ ಜವಾಬ್ದಾರಿ ನೀಡಿದೆ.

ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳನ್ನು ಕೂಡ ಜೊತೆಯಲ್ಲಿಟ್ಟುಕೊಳ್ಳುವ ನಿಟ್ಟಿನಲ್ಲಿ ಮಾಜಿ ಸಂಸದ ಧ್ರುವನಾರಾಯಣ ಅವರು ಕೂಡ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತರಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಅವರು ಶಾಸಕರಾಗಿ, ಎರಡು ಬಾರಿ ಸಂಸದರಾಗಿ ದೆಹಲಿ ಹಾಗೂ ಕರ್ನಾಟಕದಲ್ಲಿ ಪ್ರಭಾವ ಹೊಂದಿದ್ದಾರೆ.

ಈಗಾಗಲೇ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್ ಅವರನ್ನು ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ಸಾರಥ್ಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ ಈಗ ಮತ್ತಿಬ್ಬರು ಕಾರ್ಯಾಧ್ಯಕ್ಷರ ನೇಮಕವಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಎಲ್ಲಾ ಸಮುದಾಯಗಳನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನ ದಾಳ ಉರುಳಿಸಿದ್ದು, ಮುಂದಿನ ರಾಜ್ಯ ಸಾವ್ರರ್ತಿಕ ಚುನಾವಣೆಗೆ ತಯಾರಿ ಆರಂಭದ ಮುನ್ನೋಟ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Sri Raghav

Admin