ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ, ಆಕಾಂಕ್ಷಿಗಳಲ್ಲಿ ಮತ್ತೆ ಚಿಗುರೊಡೆದ ಕನಸು

ಬೆಂಗಳೂರು, ಜ.19-ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಕಾರ್ಯಾಧ್ಯಕ್ಷರನ್ನು ನೇಮಿಸಬೇಕು ಎಂಬ ಒತ್ತಡ ಹಾಗೂ ಹೈಕಮಾಂಡ್‍ನಲ್ಲಿರುವ ಗುಂಪುಗಾರಿಕೆಯಿಂದಾಗಿ ಕರ್ನಾಟಕ ಕಾಂಗ್ರೆಸ್‍ನ ಅಧ್ಯಕ್ಷರ ನೇಮಕ ವಿಷಯದಲ್ಲಿ ವಿಳಂಬವಾಗುತ್ತಿದೆ. ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ಆದರೆ ಇದಕ್ಕೆ ಅಡ್ಡಗಾಲಾಗಿ ನಾಲ್ಕು ಮಂದಿ ಕಾರ್ಯಾಧ್ಯಕ್ಷರನ್ನು ನೇಮಿಸಬೇಕು ಎಂಬ ಪ್ರಸ್ತಾವನೆ ಹುಟ್ಟುಕೊಂಡಿದೆ. ಡಿ.ಕೆ.ಶಿವಕುಮಾರ್ ಅವರು ಕಾರ್ಯಾಧ್ಯಕ್ಷರ ನೇಮಕಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮಾಜಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂ.ಬಿ.ಪಾಟೀಲ್ ಚುರುಕಾಗಿದ್ದು, ನಿನ್ನೆಯಿಂದ ಪ್ರಮುಖ ನಾಯಕರ ಮನೆಗೆ ಎಡತಾಕಲಾರಂಭಿಸಿದ್ದಾರೆ.
ಎಂ.ಬಿ.ಪಾಟೀಲ್, ಸಿದ್ದರಾಮಯ್ಯ ಅವರ ಆಪ್ತ ಎಂಬ ಮಾತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಆಪ್ತರನ್ನು ನೇಮಿಸಲು ಮೂಲ ಕಾಂಗ್ರೆಸ್ಸಿಗರು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಿ ಎಂ.ಬಿ.ಪಾಟೀಲ್‍ಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದರು ಎಂಬ ಮಾತುಗಳಿವೆ. ನಿನ್ನೆ ಖರ್ಗೆ ಅವರ ಮನೆಗೆ ತೆರಳಿದ್ದ ಎಂ.ಬಿ.ಪಾಟೀಲ್ ಸುದೀರ್ಘ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಇನ್ನೇನು ಡಿ.ಕೆ.ಶಿವಕುಮಾರ್ ಅವರ ನೇಮಕಾತಿ ಆಗಿಯೇ ಹೋಯಿತು. ಪ್ರಕಟಣೆ ಹೊರಬೀಳಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಲಾರಂಭಿಸಿದವು. ಇದರಿಂದ ಬಹಳಷ್ಟು ಮಂದಿ ಆಕಾಂಕ್ಷಿಗಳು ತಮ್ಮ ಪ್ರಯತ್ನಗಳನ್ನು ಕೈಬಿಟ್ಟು ತಟಸ್ಥವಾಗಿ ಉಳಿದರು. ಆದರೆ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಆಯ್ಕೆಯನ್ನು ಪ್ರಕಟಿಸಲು ವಿಳಂಬ ಮಾಡುತ್ತಿದ್ದು, ಆಕಾಂಕ್ಷಿಗಳು ಮತ್ತೆ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.

ದೆಹಲಿ ಮಟ್ಟದಲ್ಲಿ ಬಹಳಷ್ಟು ನಾಯಕರ ನಡುವೆ ಗುಂಪುಗಾರಿಕೆ, ಮನಸ್ತಾಪಗಳಿವೆ. ಅದನ್ನು ಬಳಸಿಕೊಂಡು ಡಿ.ಕೆ.ಶಿವಕುಮಾರ್ ಅವರ ಆಯ್ಕೆಗೆ ಅಡ್ಡಗಾಲು ಹಾಕಲು ರಾಜ್ಯದ ಬಹಳಷ್ಟು ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಮತ್ತು ಲಿಂಗಾಯತ ಸಮುದಾಯಗಳಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಡವನ್ನು ಹೆಚ್ಚಿಸಿದ್ದಾರೆ. ಸದ್ಯದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ದೆಹಲಿ ವಿಧಾನಸಭೆಯ ಟಿಕೆಟ್ ಹಂಚಿಕೆ ಹಾಗೂ ಪ್ರಚಾರ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ.

ಈ ನಡುವೆ ಸೋನಿಯಾಗಾಂಧಿ ಅವರು ವಿದೇಶ ಪ್ರವಾಸ ಕೈಗೊಂಡರೆ ಈ ತಿಂಗಳು ಪೂರ್ತಿಯಾಗಿ ಕೆಪಿಸಿಸಿ ಅಧ್ಯಕ್ಷರಿಲ್ಲದೆ ಕಾರ್ಯಾಚರಣೆ ಮಾಡುವಂತಾಗುತ್ತದೆ. ಇದಕ್ಕೆಲ್ಲ ಅವಕಾಶ ಕೊಡುವುದು ಬೇಡ. ಶೀಘ್ರವೇ ಅಧ್ಯಕ್ಷರನ್ನು ನೇಮಿಸಿ ಎಂದು ಕೆಲವು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಹಿರಿಯ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿದ್ದೇ ಆದರೆ ಮುಂದಿನ ವಾರದೊಳಗಾಗಿ ನೂತನ ಅಧ್ಯಕ್ಷರ ಆಯ್ಕೆ ಪ್ರಕಟಣೆ ಹೊರಬೀಳುವ ನಿರೀಕ್ಷೆಗಳಿವೆ.