ನಾನೇನು ಸನ್ಯಾಸಿ ಅಲ್ಲ, ಸಿಎಂ ಆಗುವ ಸಮಯ ಬಂದಿದೆ : ಗುಡುಗಿದ ಡಿಕೆಶಿ

Social Share

ಮೈಸೂರು,ಜು.19- ಕೆಪಿಸಿಸಿ ಅಧ್ಯಕ್ಷರಾಗಿರುವವರೇ ಮುಖ್ಯಮಂತ್ರಿ ಯಾಗುವುದು ಸಹಜ, ಈಗ ಉತ್ತಮ ಅವಕಾಶ ಬಂದಿದೆ. ಈ ಹಿನ್ನೆಲೆಯಲ್ಲಿ ಸಮುದಾಯ ನನ್ನ ಬೆನ್ನ ಹಿಂದೆ ನಿಲ್ಲ ಬೇಕು, ಅವಕಾಶ ಕಳೆದುಕೊಳ್ಳಬಾರದು ಎಂದು ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಮಾದ್ಯಮದೊಂದಿಗೆ ಸಂವಾದ ನಡೆಸಿದ ವೇಳೆ ಮಾತನಾಡಿದ ಅವರು, ಈ ಮೊದಲು ಜುಲೈ 15ರಂದು ಒಕ್ಕಲಿಗರ ಸಮಾವೇಶದಲ್ಲಿ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ನಾವೇನು ಖಾವಿ ತೊಟ್ಟಿಲ್ಲ. ಅಧಿಕಾರಕ್ಕಾಗಿಯೇ ರಾಜಕಾರಣ ಮಾಡುತ್ತೇವೆ. ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದರು, ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿದ್ದರು. ಅವರ ಬಳಿಕ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ. ಅದನ್ನು ಕಳೆದುಕೊಳ್ಳಬೇಡಿ. ಇಡೀ ಸಮುದಾಯ ನನ್ನ ಬೆನ್ನ ಹಿಂದೆ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದರು.

ನಾನು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಸಮುದಾಯಗಳು ನನ್ನನ್ನು ಬೆಂಬಲಿಸಲಿವೆ. ಈಗ ನಾನು ಒಂದು ಹಂತಕ್ಕೆ ತಲುಪಿದ್ದೇನೆ. ನನ್ನ ಹಿಂದೆ ನಿವೆಲ್ಲಾ ನಿಲ್ಲಿ ಎಂದು ಒಕ್ಕಲು ವೃತ್ತಿ ಮಾಡುವವರಲ್ಲಿ ಮನವಿ ಮಾಡಿದ್ದೇನೆ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬ ಆಚರಣೆಯಲ್ಲಿ ತಪ್ಪೇನು ಇಲ್ಲ. ಜೀವನದಲ್ಲಿ ಹಲವು ಮೈಲಿ ಗಲ್ಲುಗಳು ಇರುತ್ತವೆ. ಪ್ರತಿಯೊಬ್ಬರಿಗೂ ಅವರದೇ ಆದ ಶೈಲಿ ಇದೆ. ನಾನು ನನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದೇನೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ಅಲ್ಲಿ ಪುಸ್ತಕ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮಾಡಿದ ಜನ ಸೇವೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.

ಸಿದ್ದರಾಮಯ್ಯ ಅವರ ಜಯಂತಿ ಪಕ್ಷದ ಕಾರ್ಯಕ್ರಮವೇ ಹೊರತು, ವ್ಯಕ್ತಿ ಪೂಜೆ ಅಲ್ಲ. ನಾನು ಮತ್ತು ರಾಹುಲ್‍ಗಾಂಧಿ ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು. ಇಂದು ನಾನು ಹೆಗ್ಗಡೆದೇವನಕೋಟೆಯಲ್ಲಿ ನಡೆಯುವ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಲಿದ್ದೇನೆ. ನಾವು ಅಧಿಕಾರದಲ್ಲಿದ್ದಾಗ ಕೆಂಪೇಗೌಡ ಜಯಂತಿಯನ್ನು ಇಡೀ ರಾಜ್ಯದಲ್ಲಿ ಪ್ರಾರಂಭಿಸಿದ್ದೇವು ಎಂದರು.

ಮೈಸೂರು ಪತ್ರಕರ್ತರನ್ನು ಭೇಟಿ ಮಾಡಬೇಕೆಂದು ನಾನೇ ಸ್ವ ಇಚ್ಛೆಯಿಂದ ತೀರ್ಮಾನಿಸಿದ್ದೆ. ಇಲ್ಲಿನ ಮಾಧ್ಯಮವನ್ನು 37-38 ವರ್ಷಗಳಿಂದ ಗಮನಿಸುತ್ತಾ ಇದ್ದೇನೆ, ಪ್ರಭಾವಿಯಾಗಿದೆ. ಇಲ್ಲಿನ ಪತ್ರಕರ್ತರು ಏನೇ ಸುದ್ದಿ ಮಾಡಿದರೂ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಲಿದೆ. ಸ್ಥಳೀಯ ಮಾಧ್ಯಮಗಳು ಕೂಡ ಶಕ್ತಿಯುತವಾಗಿದೆ. ಅದಕ್ಕಾಗಿ ಪಕ್ಷದ ಅಧ್ಯಕ್ಷನಾಗಿ ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ ಎಂದಿದ್ದಾರೆ.

ಮೈಸೂರು ರಾಜಕಾರಣ, ಮೈಸೂರಿನ ಅಭಿವೃದ್ಧಿ, ಮೈಸೂರಿನ ಬೆಳವಣಿಗೆಯ ಬಗ್ಗೆ ನನಗೆ ಕರ್ನಾಟಕ ರಾಜ್ಯಕ್ಕೆ ಯಾವ ರೀತಿ ಒಂದು ಅಭಿವೃದ್ಧಿ ಶೀಲ ಕರ್ನಾಟಕವಾಗಬೇಕೆಂದು ಬಯಸುತ್ತೇವೆ ಅದೇ ರೀತಿ ಕುವೆಂಪು ನಾಡಿನ ಕರ್ನಾಟಕ, ಕನಕದಾಸರ, ಬಸವಣ್ಣನವರ, ಶಿಶುನಾಳ ಶರೀಫರ ಕರ್ನಾಟಕ ಆಗಬೇಕು ಎನ್ನುವುದು ನಮ್ಮೆಲ್ಲರ ಆಸೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರ್ವಜನಿಕರ ಬದುಕಿಗೆ ತೊಂದರೆ ಉಂಟಾಯಿತು. ಶಾಂತಿ ಕದಲಿಸಿ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗಿದೆ ಎಂದರು. ಆಪರೇಷನ್ ಕಮಲದ ನಂತರ ನಡೆದ ಉಪಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡುರಾವ್, ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸೋನಿಯಾಗಾಂಧಿ ಅವರು ಎಲ್ಲರೊಂದಿಗೆ ಚರ್ಚೆ ನಡೆಸಿ, ನನ್ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ಸಿದ್ದರಾಮಯ್ಯರನ್ನು ಪ್ರತಿಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರೆಸಿದರು. ಜೊತೆಗೆ ಐದು ಮಂದಿ ಕಾರ್ಯಾಧ್ಯಕ್ಷರನ್ನು ನೇಮಿಸಿ ಪಕ್ಷ ಸಂಘಟನೆಗೆ ಬಲ ತುಂಬಿದ್ದಾರೆ ಎಂದರು.

ಕೊರೋನಾ ಸಂದರ್ಭ ಎರಡು ವರ್ಷ ಮನೆಯಿಂದ ಆಚೆ ಬರಲು ಆಗಿರಲಿಲ್ಲ. ಪ್ರತಿಯೊಬ್ಬರು ಸಂಕಟದಲ್ಲಿದ್ದಾಗ ಕಾಂಗ್ರೆಸ್ ಕಛೇರಿಯನ್ನು ಮುಚ್ಚಲಿಲ್ಲ. ಪ್ರಾಣವನ್ನೇ ಬದಿಗಿಟ್ಟು ರಾಜ್ಯದ ಹಿತಕ್ಕೋಸ್ಕರ ಕೆಲಸ ಮಾಡಿದ್ದೇವೆ.
ಪ್ರತಿ ರೈತನ ಸಂಕಟದಲ್ಲಿ ಭಾಗಿಯಾಗಿದ್ದೇವೆ, ಆಹಾರ, ಆರೋಗ್ಯ ಸಲಕರಣೆಗಳ ಪೂರೈಕೆ ಮಾಡಿದ್ದೇವೆ. ಆ್ಯಂಬುಲೆನ್ಸ್ , ಆಮ್ಲಜನಕ, ಔಷ ಒದಗಿಸಿದ್ದೇವೆ ಎಂದರು.

ಚಾಮರಾಜನಗರದಲ್ಲಿ ಎಂತಹ ದುರಂತವಾಯಿತು. ಅಂತಹ ಸಂದರ್ಭದಲ್ಲಿ ನಾನು ಸಿದ್ದರಾಮಯ್ಯನವರು ಹೋಗಿ ವಿಚಾರಿಸಿ ಹೋರಾಟ ನಡೆಸಿ 36 ಮಂದಿ ಸತ್ತಿದ್ದಾರೆಂದು ಬೆಳಕಿಗೆ ತಂದೆವು. ನ್ಯಾಯಾಲಯ ಕೂಡ ಆದೇಶ ಕೊಟ್ಟಿತು. ಪ್ರತಿ ಕುಟುಂಬಕ್ಕೂ ಸಾಂತ್ವನ ಹೇಳಿ ಧೈರ್ಯ ಕೊಟ್ಟು ಒಂದೊಂದು ಲಕ್ಷ ರೂ.ಪರಿಹಾರ ಕೊಟ್ಟು ದೇಶಕ್ಕೆ ಸಂದೇಶ ನೀಡುವ ಕೆಲಸ ಮಾಡಿದ್ದೇವೆ.

ಈಗಲೂ ಕೂಡ ಯಾರು ಕೋವಿಡ್ ನಿಂದ ಸತ್ತಿದ್ದಾರೆ ಅವರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮತ್ತಿತರರಿದ್ದರು.

Articles You Might Like

Share This Article