ಭಾವನಾತ್ಮಕ ವಿಷಯ ಬದಿಗಿಟ್ಟು, ಉದ್ಯೋಗ ಸೃಷ್ಟಿ ವಿಷಯ ಚರ್ಚಿಸಿ : ಡಿಕೆಶಿ

Social Share

ಬೆಂಗಳೂರು,ಆ.22-ಭಾವನಾತ್ಮಕ ವಿಷಯಗಳನ್ನು ಬದಿಗಿಟ್ಟು, ಉದ್ಯೋಗ ಸೃಷ್ಟಿ ವಿಷಯಗಳನ್ನು ಚರ್ಚಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ತಮ್ಮ ನಿವಾಸದಲ್ಲಿಂದು ಭಾರತ್ ಜೋಡೋ ಯಾತ್ರೆಯ ಬಗ್ಗೆ ಹಿರಿಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಕೊಡುಗು ಪ್ರವಾಸಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಪ್ರಚೋದನೆ ನೀಡಿದೆ.

ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯವರ ಪ್ರವಾಸಕ್ಕೆ ಅಡ್ಡಿಪಡಿಸಲು ಅವಕಾಶಗಳಿವೆ. ನಾವು ಈ ವಿಷಯವಾಗಿ ಯಾವುದೇ ಕರೆ ನೀಡುವುದಿಲ್ಲ, ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವುದಿಲ್ಲ. ಆದರೆ ಬಿಜೆಪಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರ ಮತ್ತು ಬಿಜೆಪಿ ನಡೆಸುತ್ತಿರುವ ಕೃತ್ಯಗಳಿಂದ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಳಾಗುತ್ತಿದೆ. ಬಂಡವಾಳ ಹೂಡಿಕೆಗೆ ಹಿನ್ನಡೆಯಾಗಿದೆ ಶಿವಮೊಗ್ಗದಂತಹ ಜಿಲ್ಲೆಗಳಲ್ಲಿ ಪದೇ ಪದೇ ಗಲಭೆಗಳಿಂದ ಗೊಂದಲಗಳಾಗುತ್ತಿವೆ ಎಂದರು. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ ನಡೆಯಲಿದೆ. 8 ಜಿಲ್ಲೆಗಳನ್ನು ಹಾದುಹೋಗಲಿದೆ.

ಬಳ್ಳಾರಿ ಹೊರತುಪಡಿಸಿ ಚಾಮರಾಜನಗರ, ಮೈಸೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಸೇರಿ ಹಲವು ಜಿಲ್ಲೆಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ ಎಂದರು.

ಪ್ರತಿದಿನ ಎಷ್ಟು ಕಿ.ಮೀ ಪಾದಯಾತ್ರೆ ನಡೆಯಬೇಕು, ಯಾವ ಯಾವ ಸ್ಥಳದಲ್ಲಿ ಕಾರ್ಯಕ್ರಮಗಳನ್ನು ಆರಂಭಿಸಬೇಕು ಎಂಬುದನ್ನ ದೆಹಲಿ ನಾಯಕರು ನಿರ್ಧರಿಸಲಿದ್ದಾರೆ. ರಾಜ್ಯದಲ್ಲಿ ನಡೆದಿರುವ ಯಾತ್ರೆಯ ಉಸ್ತುವಾರಿಯನ್ನು ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ನಿರ್ವಹಿಸಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಕಾರ್ಯಕರ್ತರು, ಪ್ರತಿನಿಗಳು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

Articles You Might Like

Share This Article