ಚಿತ್ರದುರ್ಗ,ಅ.11- ಮೂರು ವರ್ಷಗಳಿಂದ ಏನೂ ಮಾಡದೆ ಕಾಲ ಕಳೆದ ಬಿಜೆಪಿ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಕಲ್ಪ, ಸ್ಪಂದನ ಎಂಬ ಯಾತ್ರೆಗಳನ್ನು ಮಾಡಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಭಾರತ್ ಜೋಡೊ ಯಾತ್ರೆಯ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಯಾತ್ರೆಯಿಂದ ವಿಚಲಿತರಾಗಿರುವ ಬಿಜೆಪಿ ನಾಯಕರು ಪ್ರತಿಯಾಗಿ ಯಾತ್ರೆ ನಡೆಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಧಿಕಾರ ಇದ್ದಾಗ ಯಾವ ಯಾತ್ರೆಗಳನ್ನು ಬೇಕಾದರೂ ಮಾಡಬಹುದು. ಆದರೆ ಕಾಂಗ್ರೆಸ್ ಅಧಿಕಾರ ಇಲ್ಲದೇ ಇದ್ದಾಗಲೂ ಯಾತ್ರೆ ನಡೆಸಿದೆ. ಐಕ್ಯತಾ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದನ್ನು ನೋಡಿ ಬಿಜೆಪಿ ಜನರ ಬಳಿ ಹೋಗಲು ಮುಂದಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸರ್ಕಾರ ತನ್ನದೇ ಸಾಧನೆಯನ್ನು ಬಿಂಬಿಸಿಕೊಳ್ಳುತ್ತಿದೆ. ಮೀಸಲಾತಿ ಪರಿಷ್ಕರಣೆಗಾಗಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ ಪಕ್ಷ ಮೀಸಲಾತಿ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಈಗ ತೆಗೆದುಕೊಂಡಿರುವ ನಿರ್ಧಾರ ನಮ್ಮದೇ ಬೇರು ಎಂದು ಹೇಳಿದರು.
ಪ್ರತಿ ಹಂತದಲ್ಲೂ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದೇವೆ. ಇಷ್ಟೊತ್ತಿಗಾಗಲೇ ನಿರ್ಧಾರ ತೆಗೆದುಕೊಂಡು ಸಂಸತ್ನಲ್ಲಿ ಪರಿಚ್ಛೇಧ 9ರಡಿ ವಿಷಯ ಸೇರ್ಪಡೆಯಾಗಬೇಕಿತ್ತು. ಆದರೆ ಅದನ್ನು ಮಾಡದೆ ಕೇವಲ ಚುನಾವಣೆ ಕಾರಣಕ್ಕಾಗಿ ಅಗ್ಗದ ಪ್ರಚಾರ ಪಡೆಯುತ್ತಿದೆ. ಕೊನೆಯ ಹಂತದಲ್ಲಿ ಮೀಸಲಾತಿ ಪರಿಷ್ಕರಣೆ ಮಾಡಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ರಾಹುಲ್ ಗಾಂ ಭಾಗವಹಿಸಬೇಕಿತ್ತು. ನಾವು ಸೋನಿಯಾ ಗಾಂ ಹಾಗೂ ಪ್ರಿಯಾಂಕ ಗಾಂ ಅವರಲ್ಲಿ ಮನವಿ ಮಾಡಿದ್ದರು. ಪ್ರಿಯಾಂಕ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಭಾರತ ಐಕ್ಯತಾ ಯಾತ್ರೆ ಮುಂದುವರೆಯುತ್ತದೆ ಎಂದು ತಿಳಿಸಿದರು.
ಮುಲಾಯಂ ಸಿಂಗ್ ಯಾದವ್ ರಾಷ್ಟ್ರ ರಾಜಕಾರಣದಲ್ಲಿ ರಾಜ್ಯತೀತ ರಾಜಕಾರಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಐಕ್ಯತಾ ಯಾತ್ರೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಗುವುದು ಎಂದರು. ಐಕ್ಯತಾ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ಅ.15ರಂದು ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಅದರಲ್ಲಿ ರಾಜ್ಯದ ಎಲ್ಲ ಭಾಗಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಪಾದಯಾತ್ರೆ ನಡುವೆ ಯಾತ್ರಾರ್ಥಿಗಳಿಗೆ ಮತದಾನ ಮಾಡಲು ಬೂತ್ ಸ್ಥಾಪನೆ ಮಾಡಲಾಗುವುದು. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ರವರು ಚುನಾವಣೆಯಲ್ಲಿ ಸ್ಪರ್ಧೆಯಲಿದ್ದು, ಖರ್ಗೆ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಸದಸ್ಯರಾಗಿರುವುದರಿಂದ ಕೆಪಿಸಿಸಿ ಕಚೇರಿಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.