ಕೇವಲ 30 ಮಂದಿ ಮೇಲೆ ಏಕೆ ಎಫ್‍ಐಆರ್..? : ಡಿಕೆಶಿ

Social Share

ಕನಕಪುರ,ಜ.10-ಕೊರೋನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕಪ್ರ್ಯೂ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪಕ್ಕೆ ರ್ಯಾಲಿ ಮಾಡಬೇಡಿ ಎಂದು ನೋಟೀಸ್ ಕೊಟ್ಟಿದ್ದಾರೆ. ಇದು ಕಾನೂನು ಬಾಹಿರ. ಕಪ್ರ್ಯೂ ಉಲ್ಲಂಘಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಕೇವಲ 30 ಮಂದಿ ಮೇಲೆ ಏಕೆ ಎಫ್‍ಐಆರ್ ಹಾಕಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹಾಗೂ ಸಿದ್ಧರಾಮಯ್ಯ ಸೇರಿದಂತೆ ಮೂವತ್ತು ಮಂದಿ ಮೇಲೆ ಸಾತನೂರು ಠಾಣೆಯಲ್ಲಿಎಫ್‍ಐಆರ್ ದಾಖಲಾಗಿದೆ.
ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದರಲ್ಲ, ಅವರ ಮೇಲೆಲ್ಲಾ ಕೇಸು ಹಾಕುತ್ತಾರೆಯೇ ? ಕೇವಲ ಮೂವತ್ತು ಜನರ ಮೇಲೆ ಕೇಸು ಹಾಕಿದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ. ಪಾದಯಾತ್ರೆಯಲ್ಲಿ ಸಾಧು-ಸಂತರು ಭಾಗವಹಿಸಿದ್ದರು. ನಾಡಿನ ಅನೇಕ ಗಣ್ಯರು ಭಾಗವಹಿಸಿದ್ದರು. ಅವರ ಮೇಲೂ ಕೇಸು ಹಾಕಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.
ನಿಮಗೆ ಕೊರೋನಾ ಬಂದಿದೆ, ಚೆಕ್ ಮಾಡಬೇಕು ಎಂದು ಅಧಿಕಾರಿಗಳು ನನ್ನ ಬಳಿ ಬಂದಿದ್ದರು. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚು ಎಂದು ತೋರಿಸಲು ಹುನ್ನಾರ ನಡೆಸಿದ್ದಾರೆ.
ಜನರನ್ನು ಕಂಡ ಕಂಡಲ್ಲಿ ಬೆದರಿಸಲಾಗುತ್ತಿದೆ. ಕೊರೋನಾ ಸಂಖ್ಯೆ ಹೆಚ್ಚಳ ಎಂದು ಭೋಗಸ್ ಲೆಕ್ಕ ತೋರಿಸಲಾಗುತ್ತಿದೆ. ಕೊರೋನಾ ಹೆಸರಿನಲ್ಲಿ ಯಾವ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ನನಗೆ ಗೊತ್ತು ಎಂದಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮಾತಿನ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ನಾವು ಏಕೆ ಜನರಲ್ಲಿ ಕ್ಷಮೆ ಯಾಚಿಸಬೇಕು? ಏನು ತಪ್ಪು ಮಾಡಿದ್ದೇವೆ ಎಂದು ಕ್ಷಮೆ ಯಾಚಿಸಬೇಕು? ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇದು ತಪ್ಪು ಎಂದು ಕ್ಷಮೆ ಕೇಳಬೇಕಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೊರೋನಾ ಹೆಚ್ಚಳವಾದರೆ ನಮ್ಮ ಮೇಲೆ ಹೊಣೆ ಹೊರಿಸಲು ಹುನ್ನಾರ ನಡೆಸಿದ್ದಾರೆ. ಏನು ಮಾಡುತ್ತಾರೋ ಮಾಡಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ ಡಿ.ಕೆ.ಶಿವಕುಮಾರ್, ಕೊರೊನಾ ಹೆಸರಿನಲ್ಲೂ ಇವರು ಲಂಚ ಹೊಡೆಯುತ್ತಾರಲ್ಲ? ಅದರ ಹೊಣೆ ಯಾರ ಮೇಲೆ ಹೊರಿಸುತ್ತಾರೆ ? ಹತ್ತು ಸಾವಿರ ಬೆಡ್‍ಗಳನ್ನು ತಂದು ಹತ್ತು ಜನರನ್ನು ಮಲಗಿಸಲಿಲ್ಲವಲ್ಲ.
ಇದರ ಹೊಣೆ ಯಾರ ಮೇಲೆ ? ಹೋರಿಸಬೇಕು ? ಔಷಧ ಖರೀದಿಯ ಹೆಸರಿನಲ್ಲಿ ಕೋಟಿಗಟ್ಟಲೆ ಲೂಟಿ ಮಾಡಿದರಲ್ಲ ಅದರ ಹೊಣೆ ಯಾರ ಮೇಲೆ? ಲಕ್ಷಾಂತರ ಜನ ಸತ್ತರೂ ನಲವತ್ತು ಸಾವಿರ ಅಂತ ಲೆಕ್ಕ ಕೊಟ್ಟರಲ್ಲ ಅದರ ಹೊಣೆ ಯಾರ ಮೇಲೆ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಅವರು ಬರುತ್ತೇನೆ ಎಂದರು. ನಾನೇ ಬೇಡ, ಇವತ್ತು ವಿಶ್ರಾಂತಿ ಪಡೆಯಿರಿ ಎಂದು ಹೇಳಿದ್ದೇನೆ. ನಾಳೆ ಅವರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.
ನಿನ್ನೆ ಮೇಕೆದಾಟು ಸಮೀಪ ಸಂಗಮದಿಂದ 14 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ತಮ್ಮ ಹುಟ್ಟೂರು ದೊಡ್ಡ ಆಲನಹಳ್ಳಿವರೆಗೂ ನಡೆದು ಬಂದ ಡಿ.ಕೆ.ಶಿವಕುಮಾರ್ ಅವರು, ತಮ್ಮ ಮನೆಯಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಬಾಲ್ಯದ ಸ್ನೇಹಿತ ಹಾಗೂ ತಮ್ಮ ಹಳೆಯ ಕ್ಷೌರಿಕ ನಾಗರಾಜ್ ಜೊತೆ ಕ್ಷೌರ ಮಾಡಿಸಿಕೊಂಡರು.
ಮನೆಯಲ್ಲಿ ಪೂಜೆ ಮಾಡಿ ದೊಡ್ಡ ಆಲನಹಳ್ಳಿ ವೃತ್ತದಿಂದ ಎರಡನೇ ದಿನದ ಪಾದಯಾತ್ರೆ ಆರಂಭಿಸಿದರು. ಇಂದು ಕೂಡ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಚಾಮರಾಜನಗರ ಜಿಲ್ಲೆ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಂದ ಜನ ಆಗಮಿಸಿದ್ದರು. ಪಾದಯಾತ್ರೆ ಮಾದಪ್ಪನದೊಡ್ಡಿ ಮತ್ತು ಕರಿಯಣ್ಣನದೊಡ್ಡಿಯಲ್ಲಿ ಮಧ್ಯಾಹ್ನದ ಬೋಜನ ವಿರಾಮಕ್ಕೆ ವಿರಮಿಸಿತ್ತು. ನಂತರ ಮುಂದುವರೆದ ಯಾತ್ರೆ ಸಂಜೆ ಕನಕಪುರ ತಲುಪಲಿದೆ.

Articles You Might Like

Share This Article