ನಾಳೆ ಇಡಿ ವಿಚಾರಣೆಗೆ ಡಿಕೆಶಿ

Social Share

ಬೆಂಗಳೂರು,ಸೆ.18- ಭಾರತ್ ಜೋಡೋ ಯಾತ್ರೆಯ ಸಿದ್ಧತೆಗಳ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾಳೆ ಜಾರಿ ನಿರ್ದೇಶನಾಲಯ(ಇಡಿ)ದ ವಿಚಾರಣೆಗೆ ಹಾಜರಾಗಲಿದ್ದಾರೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದ ಇಡಿ ಈಗಾಗಲೇ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ನ್ಯಾಯಾಲಯದಲ್ಲಿ ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದೆ.

ಈ ನಡುವೆ ಜಾರಿ ನಿರ್ದೇಶನಾಲಯ ಹೆಚ್ಚುವರಿ ಎಫ್‍ಐಆರ್‍ಅನ್ನು ದಾಖಲಿಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ನೋಟಿಸ್ ನೀಡಿತ್ತು. ಅದರ ಅನುಸಾರ ಡಿ.ಕೆ.ಶಿವಕುಮಾರ್ ಅವರು ಇಂದು ಸಂಜೆ ದೆಹಲಿಗೆ ತೆರಳಲಿದ್ದು,
ನಾಳೆ ವಿಚಾರಣೆಯನ್ನು ಎದುರಿಸಲಿದ್ದಾರೆ.

ಹೆಚ್ಚುವರಿ ಎಫ್‍ಐಆರ್‍ನಲ್ಲಿ ಯಾವ ಆರೋಪ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಹೆಚ್ಚುವರಿ ಎಫ್‍ಐಆರ್ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ನೇತೃತ್ವದ ಭಾರತ ಐಕ್ಯತ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿದೆ.

ಪ್ರಸ್ತುತ ಕೇರಳದಲ್ಲಿರುವ ಯಾತ್ರೆ ಸೆ.30ಕ್ಕೆ ರಾಜ್ಯ ಪ್ರವೇಶಿಸಲಿದೆ. ಕರ್ನಾಟಕದಲ್ಲಿ ಯಾತ್ರೆಯನ್ನು ಯಶಸ್ಸುಗೊಳಿಸಬೇಕೆಂದು ಟೊಂಕಕಟ್ಟಿ ನಿಂತಿರುವ ಡಿ.ಕೆ.ಶಿವಕುಮಾರ್ ಹಗಲು-ರಾತ್ರಿ ಎನ್ನದೆ ಪ್ರವಾಸ ಮಾಡಿ ಪಾದಯಾತ್ರೆಯ ಮಾರ್ಗ, ಯಾತ್ರ ತಂಡ ತಂಗುವ ಸ್ಥಳಗಳ ಪರಿಶೀಲನೆ ನಡೆಸಿದ್ದು, ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.

ಬಿಡುವಿಲ್ಲದ ಒತ್ತಡದ ನಡುವೆಯೂ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗಿದೆ.

Articles You Might Like

Share This Article