ಬೆಂಗಳೂರು,ಸೆ.20- ದೆಹಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ವಿಶ್ರಾಂತಿ ಮೊರೆ ಹೋಗಿದ್ದಾರೆ. ಅಕ್ರಮ ಆಸ್ತಿ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ವಿರುದ್ಧ ಹೆಚ್ಚುವರಿ ಎಫ್‍ಐಆರ್ ದಾಖಲಿಸಿತ್ತು. ಅದರ ವಿಚಾರಣೆಗಾಗಿ ದೆಹಲಿಗೆ ತೆರಳಿದ ಡಿ.ಕೆ.ಶಿವಕುಮಾರ್ ನಿನ್ನೆ 5 ಗಂಟೆಗಳ ಕಾಲ ವಿಚಾರಣೆಗೆ ಒಳಗಾದರು.
ವಿಚಾರಣೆಯಲ್ಲಿ 35 ವರ್ಷಗಳ ಹಿಂದೆ ಸ್ಥಾಪಿಸಲಾದ ಇಂದಿರಾ ಟಾಕೀಸ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇತ್ತೀಚೆಗೆ ಯಂಗ್ ಇಂಡಿಯಾ ಸಂಸ್ಥೆಯ ಸೇವಾ ಕಾರ್ಯಗಳಿಗೆ ದೇಣಿಗೆ ನೀಡಿದ ಬಗ್ಗೆ ಮಾಹಿತಿ ಕೇಳಲಾಗಿದೆ. ಇಡಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಶೀಘ್ರ ಒದಗಿಸುವುದಾಗಿ ಡಿ.ಕೆ.ಶಿವಕುಮಾರ್ ವಿಚಾರಣೆ ಬಳಿಕ ಹೇಳಿದ್ದರು.
ಇದನ್ನೂ ಓದಿ : ಭಾರತದ ರಾಯಭಾರ ಕಚೇರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿ
ಮತ್ತೊಂದು ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ನಿನ್ನೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಇಡಿ ಜತೆಗೆ ಆದಾಯ ತೆರಿಗೆ ಇಲಾಖೆಯ ತನಿಖೆ ಪುನರಾರಂಭವಾಗುವ ಸಾಧ್ಯತೆ ಇದೆ.
ಉದ್ದೇಶ ಪೂರ್ವಕವಾಗಿ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಪದೇ ಪದೇ ಆರೋಪಿಸುತ್ತಲೇ ಇದ್ದಾರೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂ ಅವರ ಭಾರತ ಐಕ್ಯತಾ ಯಾತ್ರೆಗಾಗಿ ಸಿದ್ಧತೆ ಕೈಗೊಳ್ಳಲು ಡಿ.ಕೆ.ಶಿವಕುಮಾರ್ ಅವಿರತವಾಗಿ ಶ್ರಮಿಸುತ್ತಿದ್ದು, ವಿಶ್ರಾಂತಿ ರಹಿತವಾಗಿ ಕೆಲಸ ಮಾಡುತ್ತಿದ್ದಾರೆ.
ಈ ಬಳಲಿಕೆ ಹಿನ್ನೆಲೆಯಲ್ಲಿ ಅವರಿಗೆ ದೆಹಲಿಯಲ್ಲಿ ಜ್ವರ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಬಹುತೇಕ ಇಡಿ ವಿಚಾರಣೆ ಮುಗಿಸಿ ಇಂದು ಬೆಂಗಳೂರಿಗೆ ಅವರು ಮರಳಬೇಕಿತ್ತು. ಜ್ವರದ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆದ ಬಳಿಕ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ಆದರೂ ಭಾರತ್ ಜೋಡೋ ಯಾತ್ರೆಯ ತಯಾರಿ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ಪ್ರಮುಖವಾಗಿದೆ.