ದಿನಾಂಕ ಇಲ್ಲದ ಮಹದಾಯಿ ಅಧಿಸೂಚನೆಯಿಂದ ದಾರಿ ತಪ್ಪಿಸುವ ಯತ್ನ : ಡಿಕೆಶಿ

Social Share

ಹುಬ್ಬಳ್ಳಿ,ಜ.2- ಮಹದಾಯಿ ನದಿ ವಿವಾದದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ದಿನಾಂಕ ಇಲ್ಲದ ಅಧಿಸೂಚನೆಯೊಂದನ್ನು ಹೊರಡಿಸಿ ಬಿಜೆಪಿ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಹುಬ್ಬಳ್ಳಿಯ ವಿಮಾನನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ಕೋರಿದರು. ಎಲ್ಲಾ ಪಕ್ಷದವರಿಗೂ ಒಳ್ಳೆಯದಾಗಲಿ, ಆದರೆ ನಮ್ಮ ಪಕ್ಷಕ್ಕೆ ಅಧಿಕಾರ ಸಿಗಲಿ ಎಂದು ನಗುಮುಖದೊಂದಿಗೆ ಹೇಳಿದರು.

ನೀವು ಮುಖ್ಯಮಂತ್ರಿಯಾಗಲಿ ಎಂದು ಹಾರೈಸುತ್ತೀರಾ ಎಂಬ ಪ್ರಶ್ನೆಗೆ, ಇಲ್ಲ ಮುಖ್ಯಮಂತ್ರಿಯನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್‍ಗಾಂಧಿ, ಸೋನಿಯಾ ಗಾಂಧಿಯವರನ್ನು ಒಳಗೊಂಡ ಹೈಕಮಾಂಡ್ ತೀರ್ಮಾನ ಮಾಡಲಿದೆ. ಏನೇ ತೀರ್ಮಾನ ಬಂದರೂ ನಾವು ಒಪ್ಪಿಕೊಳ್ಳುತ್ತೇವೆ ಎಂದರು.

ಮೂರು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ಗೋವಾದಲ್ಲಿ ಆಪರೇಷನ್ ಕಮಲ ನಡೆಸಿದ ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಚರ್ಚೆ ಮಾಡಿ ಮಹದಾಯಿ ವಿಷಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ. ರಾಜ್ಯದಿಂದ ಚುನಾಯಿತರಾಗಿರುವ ಬಿಜೆಪಿಯ 26 ಮಂದಿ ಸಂಸದರು ಪ್ರಧಾನಿ ಮುಂದೆ ನಿಂತು ಮಾತನಾಡಲು ಏಕೆ ಧೈರ್ಯ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಕಾಂಗ್ರೆಸ್ ಪ್ರತಿಭಟನೆಯ ದಿನಾಂಕ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮತಿ ನೀಡಿರುವ ಅಧಿಸೂಚನೆಯೊಂದನ್ನು ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ ಇಲ್ಲ. ಅದೂ ಹೋಗಲಿ, ಸುಪ್ರೀಂಕೋರ್ಟ್ ಅಂತಿಮ ತೀರ್ಪಿಗೆ ಬದ್ಧವಾಗಿ ಅನುಮತಿ ನೀಡಲಾಗಿದೆ ಎಂದು ಷರತ್ತು ವಿಧಿಸಿದ್ದಾರೆ.

ಸುಪ್ರೀಂಕೋರ್ಟ್ ಪ್ರಕರಣ ಇತ್ಯರ್ಥವಾಗುವುದು ಯಾವಾಗ ನಾವು ಸತ್ತ ಮೇಲಾ. ಎಲ್ಲಾ ಕಡೆ ಬಿಜೆಪಿಯವರೇ ಅಧಿಕಾರದಲ್ಲಿದ್ದಾರಲ್ಲಾ ಚರ್ಚೆ ಮಾಡಿ ಯಾಕೆ ಪ್ರಕರಣಗಳನ್ನು ವಾಪಾಸ್ ತೆಗೆಸುತ್ತಿಲ್ಲ ಎಂದು ಕಿಡಿಕಾರಿದರು.ನ್ಯಾಯಾಲಯದ ಪ್ರಕರಣ ಮತ್ತೊಂದು ಕಡೆ ಇರಲಿ. ನಮ್ಮದೇ ನೆಲದಲ್ಲಿ ನಮ್ಮದೇ ಹಣ ಖರ್ಚು ಮಾಡಿ ನಾಲಾ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಮೂರು ವರ್ಷದಿಂದ ಏಕೆ ಸಾಧ್ಯವಾಗಲಿಲ್ಲ.

ವಿವಾದದಲ್ಲಿರುವ ನೀರನ್ನು ಮುಟ್ಟುವುದು ಬೇಡ. ಆದರೆ ಈಗಾಗಲೇ ನ್ಯಾಯಾೀಧಿಕರಣ ತೀರ್ಪಿನ ಪ್ರಕಾರ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳದಿರುವುದೇಕೆ ಎಂದರು.

ಒಕ್ಕಲಿಗ ಹಾಗೂ ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ಸರ್ಕಾರ ಮೂಗಿಗಲ್ಲ, ನೆತ್ತಿಯ ಮೇಲೆ ತುಪ್ಪ ಸವರಿದೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ನೀಡಲಾಗಿರುವ ಶೇ.10ರಷ್ಟು ಮೀಸಲಾತಿಯಲ್ಲಿ ಹಂಚಿಕೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಸರ್ಕಾರದ ಅಧಿಸೂಚನೆ ಆಧರಿಸಿ ಮೀಸಲಾತಿ ಪಡೆದು ಯಾರಾದರೂ ಉದ್ಯೋಗ ಪಡೆದರೆ ನ್ಯಾಯಾಲಯದಲ್ಲಿ ಹಿನ್ನೆಡೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇನ್ನೂ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಲಾಗಿದೆ. ಆದರೆ ಅದನ್ನು ಷಡ್ಯೂಲ್ 9ಕ್ಕೆ ಸೇರಿಸಲು ಸಂಸತ್ ನಲ್ಲಿ ಚರ್ಚೆ ನಡೆಸಬೇಕು. ಆದರೆ ಅದಕ್ಕೆ ಈವರೆಗೂ ಕೇಂದ್ರ ಸರ್ಕಾರಕ್ಕೆ ರಾಜ್ಯ ಪ್ರಸ್ತಾವನೆ ಸಲ್ಲಿಸಿಲ್ಲ. ಜನರನ್ನು ದಿಕ್ಕು ತಪ್ಪಿಸಲು ಮುಖ್ಯಮಂತ್ರಿ ಯತ್ನಿಸುತ್ತಿದ್ದಾರೆ ಎಂದರು.

ಚುನಾವಣೆಗೆ ಬಾಕಿ ಇರುವುದು 90 ದಿನ ಮಾತ್ರ. ರಾಜ್ಯ ಸರ್ಕಾರ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಈ ತಿಂಗಳ 28ರ ಒಳಗೆ ಅಡಿಗಲ್ಲು ಹಾಕಿ ಮುಗಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಮುಂದಿನ 60 ದಿನಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಮೀಸಲಾತಿ ಪರಿಷ್ಕರಣೆಗೆ ರಚಿಸಲಾಗಿರುವ ಸಮಿತಿ ವರದಿ ನೀಡುವುದು ಯಾವಾಗ ಅದು ಜಾರಿಯಾಗುವುದು ಯಾವಾಗ. ಏಕೆ ಇಂತಹ ದಾರಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ಅಸಮದಾನ ವ್ಯಕ್ತಪಡಿಸಿದರು.

ಲಿಂಬಾವಳಿ ವಿರುದ್ಧ ಕಾನೂನು ಪ್ರಕಾರ ತನಿಖೆ : ಸಿಎಂ ಬೊಮ್ಮಾಯಿ

ನಮ್ಮ ಸರ್ಕಾರ ಅಕಾರಕ್ಕೆ ಬಂದಾಗ ಎಲ್ಲರಿಗೂ ಸಮಬಾಳು, ಸಮಪಾಲು ಸಿದ್ಧಾಂತವನ್ನು ಅನುಸರಿಸುತ್ತೇವೆ. ಮೊದಲು ಈ ಸರ್ಕಾರ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ. ನಾವು ಸರ್ಕಾರ ರಚಿಸಿದ ಆರು ತಿಂಗಳಲ್ಲೇ ಮಹಾದಾಯಿ ಕಾಮಗಾರಿ ಆರಂಭಿಸುತ್ತೇವೆ ಎಂದರು.

kpcc president, dk shivakumar, Mahadayi, river, Congress, BJP,

Articles You Might Like

Share This Article