ತಪ್ಪು ಮಾಹಿತಿಗಳಿಂದ ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ : ಡಿಕೆಶಿ

Social Share

ಬೆಂಗಳೂರು, ಜ.30- ದೇಶದಲ್ಲಿ ಜನರನ್ನು ವಿವಿಧ ವಿಚಾರಗಳಲ್ಲಿ ತಪ್ಪು ದಾರಿಗೆ ಎಳೆಯಲಾಗುತ್ತಿದೆ. ನಿಧಾನಕ್ಕೆ ಜನರಿಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮಗಾಂಜೀ ಅವರ 74 ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಷ್ಟ್ರಕ್ಕೆ ಒದಗಿರುವ ತಾತ್ಕಾಲಿಕ ಸಂಕಷ್ಟ ಸಮಯ, ಶಾಶ್ವತ ಅಲ್ಲ. ಜನರಿಗೆ ಶೀಘ್ರವೇ ಗಾಂಧಿಜೀ ಅವರ ತತ್ವಗಳು ಮನವರಿಕೆಯಾಗುತ್ತವೆ. ಅದಕ್ಕೆ ಉದಾಹರಣೆ ಎಂದರೆ ದೆಹಲಿಯಲ್ಲಿ ರೈತರು ಒಂದು ವರ್ಷ ಹೋರಾಟ ನಡೆಸಿ ಪ್ರಧಾನಿಯನ್ನು ಕ್ಷಮೆ ಕೇಳುವಂತೆ ಮಾಡಿದ್ದು ಎಂದು ಹೇಳಿದರು.
ಮಹಾತ್ಮಗಾಂಧಿಜೀ ಎಲ್ಲ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಮಾರ್ಗದರ್ಶನ ಮಾಡುತ್ತಿದ್ದರು. ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸ. ತ್ರಿವರ್ಣ ಧ್ವಜದಲ್ಲಿ ಇರುವ ಚರಕ ದೇಶದ ಸ್ವಾವಲಂಬನೆಯ ಪ್ರತೀಕ. ಸಹಕಾರ ತತ್ವ ಅದರಲ್ಲಿ ಅಡಗಿತ್ತು. ನನ್ನ ಧರ್ಮದಲ್ಲಿ ಸತ್ಯ-ಅಹಿಂಸಾ ತತ್ವ ಅಡಗಿದೆ ಎಂದು ಗಾಂಧಿಜೀ ಪ್ರತಿಪಾದಿಸಿದರು.
ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಹೋರಾಟ ನಡೆಸಿತ್ತು. ಅಲ್ಲಿ ನಾವು ಲಾಠಿ, ಬಂದೂಕು ತೆಗೆದುಕೊಂಡು ಹೋಗಿರಲಿಲ್ಲ. ಆದರೂ ಅಡ್ಡಿ ಪಡಿಸಲಾಯಿತು. ಹೋರಾಟ ನಮ್ಮ ರಕ್ತಗತವಾಗಿದೆ. ಗಾಂಧಿಜೀ ಅವರ ಆದರ್ಶಗಳು, ಮಾರ್ಗದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹೋರಾಟ, ತ್ಯಾಗ, ಬಲಿದಾನ, ಅಹಿಂಸೆ ನಮ್ಮ ಅಸ್ತ್ರಗಳು. ಅದನ್ನು ಅನುಸರಿಸಿ ಕಾಂಗ್ರೆಸ್ಸಿಗರು ಹೋರಾಟದ ಮೂಲಕ ದೇಶ ಉಳಿಸಬೇಕಿದೆ ಎಂದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಾಥೂರಾಮ್ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ ಮತ್ತು ಮೊದಲ ದೇಶ ದ್ರೋಹಿ.
ಪಾಕಿಸ್ತಾನ ವಿಭಜನೆಯಾದಾಗ ಅಲ್ಲಿಗೆ 55 ಕೋಟಿ ರೂಪಾಯಿ ಕೊಡಬೇಕು ಎಂದು ಮಹಾತ್ಮಗಾಂಧಿ ಜೀ ಕರಾರು ಮಾಡಿಕೊಂಡಿದ್ದರು.ಅದು ಕೆಲವರಿಗೆ ಇಷ್ಟವಾಗಲಿಲ್ಲ ಅದಕ್ಕಾಗಿ ಗೋಡ್ಸೆ ಕೊಲೆ ಮಾಡಲಾಯಿತು ಎಂದು ಸಂಘ ಪರಿವಾರ ಅಪಪ್ರಚಾರ ನಡೆಸುತ್ತಿದೆ. ಭಾರತದ ಮೇಲೆ ಮತ್ತು ಹಿಂದುಗಳ ಮೇಲೆ ಪ್ರೀತಿ ಇದ್ದಿದ್ದರೆ ಮೊಹಮ್ಮದ್ ಆಲಿ ಜಿನ್ನಾನನ್ನು ಕೊಲ್ಲಬೇಕಿತ್ತು. ಗಾಂಧಿಜೀ ವಿಶ್ವದಲ್ಲಿ ದೊಡ್ಡ ಹಿಂದು.
ಮುಂಜಾನೆ ಎದ್ದು 4.30ಕ್ಕೆ ಎದ್ದು ರಘುಪತಿ ರಾಘವ ರಾಜಾರಾಮ್ ಎಂಬ ಶ್ಲೋಕದ ಮೂಲಕ ದಿನ ಆರಂಭಿಸಿ, ರಾಮಭಜನೆಯ ಮೂಲಕ ಮಲಗುತ್ತಿದ್ದರು. ಹಿಂದು ಧರ್ಮವನ್ನು ಆಚರಣೆ ಮಾಡುವವರನ್ನು ಕೊಲ್ಲುವ ಮೂಲಕ ಸಂಘ ಪರಿವಾರ ಹಿಂದುಗಳನ್ನು ಕೊಲ್ಲುವ ಸಂಪ್ರದಾಯಕ್ಕೆ ನಾಂದಿಯಾಡಿತ್ತು ಎಂದು ಆರೋಪಿಸಿದರು.
ಹರಿಜನರಿಗೆ ದೇವಾಲಯಕ್ಕೆ ಪ್ರವೇಶ ಇರಬೇಕು, ಭೇದ-ಭಾವ ಇರದೆ ಸಮಾನತೆ ಜಾರಿಯಾಗಬೇಕು ಎಂಬ ಪ್ರಗತಿ ಪರ ಚಿಂತನೆಗಳನ್ನುಗಾಂಧಿಜೀ ಪ್ರತಿಪಾದಿಸಿದರು. ಅವರನ್ನು ಬದುಕಲು ಬಿಟ್ಟರೆ ತಮಗೆ ಅಪಾಯ ಎಂದು ಸಂಘ ಪರಿವಾರದವರು ಗೋಡ್ಸೆ ಮೂಲಕ ಗಾಂಧಿಜೀ ಅವರನ್ನು ಕೊಲೆ ಮಾಡಿಸಿದರು. ಸಂಘ ಪರಿವಾರದವರು ಸಾಮಾಜಿಕ ನ್ಯಾಯಾದ ವಿರೋಧಿಗಳು, ಸಂವಿಧಾನದ ವಿರೋಧಿಗಳು, ಜಾತ್ಯತೀತ ವಿರೋಧಿಗಳು ಎಂದು ಹೇಳಿದರು.
ಗೋಡ್ಸೆ ಮೊದಲು ಮಹಾತ್ಮ ಗಾಂಧಿಜೀ ಅವರ ಕಾಲಿಗೆ ಬಿದ್ದು ನಂತರ ಎದೆಗೆ ಗುಂಡು ಹೊಡೆದಿದ್ದಾನೆ. ಗೋಡ್ಸೆ ಒಬ್ಬ ಉಗ್ರವಾದಿ, ಕೊಲೆಗಾರ ಅವನನ್ನು ವೈಭವೀಕರಿಸಬೇಡಿ ಎಂದು ಇಷ್ಟು ವರ್ಷವಾದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಿಯೂ ಹೇಳಲಿಲ್ಲ. ಕಳೆದ ವರ್ಷ ಟ್ವಿಟರ್‍ನಲ್ಲಿ ಸಂಘಪರಿವಾರ ಗೋಡ್ಸೆಯನ್ನು ದೊಡ್ಡ ನಾಯಕ ಎಂದು ವೈಭವೀಕರಿಸಿತ್ತು. ಆಗಲೂ ಮೋದಿ ಮೌನವಾಗಿದ್ದರು ಎಂದು ಆಕ್ಷೇಪಿಸಿದರು.
ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾತನಾಡಿ, ಇತ್ತೀಚೆಗೆ ದೇಶದಲ್ಲಿ ಗೋಡ್ಸೆಯನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತಿದೆ. ಅಹಿಂಸೆ ಮೂಲಕ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಹೋರಾಟದಲ್ಲಿ ಗಾಂಧಿಜೀ ಮುಂಚೂಣಿಯಲ್ಲಿದ್ದರು. ಈಗ ಗಾಂಧಿಜೀ ಕೊಲೆಗಾರರನ್ನೇ ವೈಭವೀಕರಿಸುತ್ತಿರುವುದರ ವಿರುದ್ಧ ಕಾಂಗ್ರೆಸ್ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ದೇಶದ ಸಮಗ್ರತೆ ಹಾಗೂ ಹಿತಕ್ಕಾಗಿ ಕೆಲಸ ಮಾಡಿದ ಗಾಂಧಿಜೀ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹತ್ಯೆಗಳಾಗಿವೆ. ಈ ಮೂರು ಹತ್ಯೆಗಳನ್ನು ಮಾಡಿದವರು ಉಗ್ರವಾದಿಗಳು. ಗಾಂಧಿಜೀ ಮತ್ತು ಕಾಂಗ್ರೆಸ್ ವಿಚಾರಧಾರೆ ಒಂದು ಕಡೆಯಾದರೆ, ಗೋಡ್ಸೆ ಅರ್ಥಾತ್ ಬಿಜೆಪಿ ವಿಚಾರಧಾರೆ ಮತ್ತೊಂದು ಕಡೆಯಾಗಿದೆ. ಗಾಂಧಿಜೀ ಬಯಸಿದ ರಾಮರಾಜ್ಯದಲ್ಲಿ ಸಮಾನತೆ, ಸಂವೃದ್ಧಿಗೆ ಅದ್ಯತೆ ಇದೆ.
ಅದನ್ನು ಪಾಲಿಸುವ ಕಾಂಗ್ರೆಸ್ ವಿಚಾರಧಾರೆಗಳನ್ನು ಮುಗಿಸುವ ಪ್ರಯತ್ನವನ್ನು ಭಯೋತ್ಪಾದಕರು ಮಾಡುತ್ತಲೆ ಇದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಎಚ್.ಆಂಜನೇಯ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್‍ನಾಥ್ ಮಾತನಾಡಿದರು. ಹಿರಿಯ ನಾಯಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ವೆಂಕಟೇಶ್, ರಾಮಚಂದ್ರಪ್ಪ, ಕೀರ್ತಿ ಗಣೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Articles You Might Like

Share This Article