ರಾಜ್ಯದ ಜನರಿಗಾಗಿ ಮೇಕೆದಾಟು ಹೋರಾಟ ತ್ಯಾಗ : ಡಿಕೆಶಿ

Social Share

ಬೆಂಗಳೂರು, ಜ.13- ಜನರ ಆರೋಗ್ಯದ ಹಿತದೃಷ್ಠಿಯಿಂದ ನೀರಿಗಾಗಿ ನಡಿಗೆ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ತ್ಯಾಗ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನ ಮೌನವಾಗಿರುವುದಾಗಿ ಹೇಳಿದ್ದೆ, ಆದರೆ ವಿಧಿಯಿಲ್ಲದೆ ಮೌನ ಮುರಿಯಬೇಕಿದೆ ಎಂದರು.
ನಿನ್ನೆ ಪಾದಯಾತ್ರೆ ಮುಗಿಸಿ 12 ಗಂಟೆ ಮೇಲೆ ಮಲಗಿದ್ದೆ. ಮಧ್ಯ ರಾತ್ರಿ ಉಪವಿಭಾಗಾಧಿಕಾರಿ ತಮ್ಮ ಬಳಿ ಬಂದಿದ್ದರು. ನೋಟಿಸ್ ನೀಡಬೇಕಿದೆ ಎಂದರು. ಏನು ನೋಟಿಸ್ ಎಂದು ಕೇಳಿದೆ. ಜಿಲ್ಲಾಧಿಕಾರಿ ಸಹಿ ಮಾಡಿದ ನೋಟಿಸ್ ಕೊಡುವುದಾಗಿ ಹೇಳಿದರು. ಜಿಲ್ಲಾಧಿಕಾರಿಗೆ ಕೋವಿಡ್ ಇದೆ ಅವರು 10 ದಿನ ಸಹಿ ಮಾಡುವಂತಿಲ್ಲ.
ಆದರೂ ಹೇಗೆ ನೋಟಿಸ್ ನೀಡಿದ್ದಾರೆ, ನನಗೆ ಕೋವಿಡ್ ಹರಡಲು ಬಂದಿದ್ದಾರಾ ಎಂದು ಹೇಳಿ ಕಳುಹಿಸಿದೆ. ನಂತರ ನೋಟಿಸ್ ಅನ್ನು ಗೋಡೆಗೆ ಅಂಟಿಸಿ ಹೋಗಿದ್ದರು. ಬೆಳಗ್ಗೆ ಎದ್ದು ಅದನ್ನು ಓದಲು ನೋಡಿದಾಗ ಅವರೇ ನೋಟಿಸ್ ಕಿತ್ತುಕೊಂಡು ಹೋಗಿದ್ದರು ಎಂದು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಹೆದ್ಧಾರಿಯ ಸಂಚಾರಕ್ಕೆ ಅಡ್ಡಿಯಾಗದಂತೆ ರಸ್ತೆಯ ಪಕ್ಕದಲ್ಲಿ ನೀರಿಗಾಗಿ ನಡಿಗೆ ನಡೆಯಲಿ ಎಂದು ಸಲಹೆ ನೀಡಿದ್ದಾರೆ. ಆಂಬ್ಯುಲೆನ್ಸ್ ಇರಲಿ, ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಸರ್ಕಾರಕ್ಕೆ ಪಾದಯಾತ್ರೆ ನಡೆಯಲಿ ಎಂಬ ಭಾವನೆ ಇದೆ. ಜನರ ಮುಂದೆ ಒಂದು ಹೇಳುತ್ತಾರೆ, ನಮಗೆ ಮತ್ತೊಂದು ರೀತಿ ಮಾತನಾಡುತ್ತಾರೆ ಎಂದು ಆಕ್ಷೇಪಿಸಿದರು.
ಪಾದಯಾತ್ರೆಯ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅಂತಿಮವಾಗಿ ಜನರು ನಮಗೆ ದೇವರು ಇದ್ದಂತೆ ಅವರ ಭಾವನೆಯಂತೆ ಪಾದಯಾತ್ರೆ ನಿಲ್ಲಿಸುತ್ತಿದ್ದೇವೆ. ನಾವು ಪಾದಯಾತ್ರೆ ಆರಂಭಿಸಿದಾಗ ರಾಮನಗರದಲ್ಲಿ ಒಬ್ಬ ಸೋಂಕಿತನು ತೀವ್ರ ನಿಗಾ ಘಟಕದಲ್ಲಿ ಇರಲಿಲ್ಲ. ಸೋಂಕು ಕೂಡ ಹೆಚ್ಚಿರಲಿಲ್ಲ. ಸರ್ಕಾರ ಉದ್ದೇಶ ಪೂರ್ವವಾಗಿ ಕೃತಕವಾಗಿ ಸೋಂಕಿತರ ಸಂಖ್ಯೆಯನ್ನು ತೋರಿಸಿದೆ ಎಂದರು.
ಪಾದಯಾತ್ರೆಗೆ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿ ಸೇರಿ ಹಲವು ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದ ಸಮಾವೇಶಕ್ಕೆ ಇಂದು ಬೆಳಗ್ಗೆ ಅನುಮತಿ ರದ್ದು ಪಡಿಸಿದ್ದಾರೆ. ಈ ಮೊದಲು ಅವರಿಗೆ ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ನಾವು ನಾಯಕರು ಇಬ್ಬರೆ ನಡೆಯಲು ಹೋದರೂ ಜನ ಸೇರುತ್ತಾರೆ. ಹಾಗಾಗಿ ನಾವು ನಡೆಯುತ್ತಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ಹೋರಾಟವನ್ನು ತ್ಯಾಗ ಮಾಡಿದ್ದೇವೆ ಎಂದು ಸ್ಪಷ್ಟ ಪಡಿಸಿದರು. ಜಿಲ್ಲಾ ಕಾಂಗ್ರೆಸ್ ಸಭೆಯ ಬಳಿಕ ನಾಯಕರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Articles You Might Like

Share This Article