ಮೈಸೂರು: ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧೃವ ನಾರಾಯಣ್ ಅವರು ಶನಿವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರಾತ್ರಿ ಅವರು ಮನೆಗೆ ಆಗಮಿಸಿದ್ದರು.
ಮಧ್ಯರಾತ್ರಿ ಇದಕ್ಕಿದಂತೆ ತೀವ್ರತರನಾದ ಎದೆ ನೋವು ಕಾಣಿಸಿಕೊಂಡಿತ್ತು, ತಕ್ಷಣ ಅವರನ್ನು ಮೈಸೂರಿನ ಒಂಟಿಕೊಪ್ಪಲ್ಲಿನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ 5.30ರ ವೇಳೆ ಕೊನೆಯುಸಿರೆಳೆದಿದ್ದಾರೆ.
ಧ್ರುವನಾರಾಯಣ್ ಅವರಿಗೆ ಈಗಿನ್ನು 61 ವರ್ಷಗಳು. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಾಧ್ಯಕ್ಷರಾಗಿ ಸದಾ ಚಟುವಟಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಧ್ರುವನಾರಾಯಣ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರು, ಅಪಾರ ಬಂಧುಗಳು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
I am shocked by the unfortunate & untimely demise of @INCKarnataka leader, former MP & my dear friend Shri R Dhruvanarayan.
My deepest condolences to his family members and well wishers. pic.twitter.com/rtM4x5Z1oW
— Siddaramaiah (@siddaramaiah) March 11, 2023
ಅವರು ಚಾಮರಾಜನಗರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದರು ಮತ್ತು ಎರಡು ಬಾರಿ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1983 ರಲ್ಲಿ ದ್ರುವ ನಾರಾಯಣ್ ಕಾಂಗ್ರೆಸ್ ಸೇರಿದ್ದರು.
1999ರಲ್ಲಿ ಮೊದಲು ಸಂತೆಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನು ಭವಿಸಿದ್ದರು. ವಿಶೇಷವೆಂದರೆ 2004ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ. ಆರ್. ಕೃಷ್ಣಮೂರ್ತಿ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದರು.
2009ರಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿ ಸಂಸದರಾಗಿ ಕೆಲಸ ನಿರ್ವಹಿಸಿದ್ದರು. ನಂತರ 2014ರಲ್ಲಿ ಮತ್ತೆ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ವಿರುದ್ಧ ಸೋಲನುಭವಿಸಿದ್ದರು.
ಧ್ರುವನಾರಾಯಣ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸಿ ಬೇರೆ ಪಕ್ಷಗಳಿಗೂ ಟಾಂಗ್ ನೀಡುತ್ತಿದ್ದರು. ಇದೀಗ ಅವರ ನಿಧನದಿಂದ ಮೈಸೂರು ಚಾಮರಾಜನಗರ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳ ನಷ್ಟ ಉಂಟಾಗಿದೆ.
ಧ್ರುವನಾರಾಯಣ್ ನಿಧಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು, ಅಭಿಮಾನಿಗಳು ಕಾಂಗ್ರೆಸ್ ಕರ್ತರು ಕಂಬನಿ ಮಿಡಿದಿದ್ದಾರೆ. ಇಂದಿನ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತಾವೆಲ್ಲರೂ ಮೈಸೂರಿಗೆ ಆಗಮಿಸಿ ದೃವನಾರಾಯಣ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
KPCC, working, president, R. Dhruvanarayan, passes away,