ನಾಳೆಯಿಂದ ಕೆ.ಆರ್.ಮಾರುಕಟ್ಟೆ ಪುನರಾರಂಭ
ಬೆಂಗಳೂರು,ಆ.31- ಲಾಕ್ಡೌನ್ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಕಾರಣ ಬಂದ್ ಆಗಿದ್ದ ನಗರದ ಪ್ರತಿಷ್ಠಿತ ಕೆ.ಆರ್.ಮಾರುಕಟ್ಟೆ ನಾಳೆಯಿಂದ ಪುನರಾರಂಭವಾಗಲಿದೆ.
ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, ಕೆ.ಆರ್.ಮಾರುಕಟ್ಟೆಗೆ ಮೇಯರ್ ಗೌತಮ್ಕುಮಾರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ ರವೀಂದ್ರ,ಜಂಟಿ ಆಯುಕ್ತ ಸರ್ಫರಾಜ್ ಖಾನ್ ಇನ್ನಿತರ ಅಧಿಕಾರಿಗಳು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಲಾಕ್ಡೌನ್ ಬಳಿಕ ಕೆ.ಆರ್.ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಹೀಗಾಗಿ ಸ್ವಚ್ಛತೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಾಳೆಯಿಂದ ಮಾರುಕಟ್ಟೆ ಪುನರಾರಂಭವಾಗಲಿದೆ. ವರ್ತಕರು ಇಲ್ಲಿ ವ್ಯಾಪಾರ ವಹಿವಾಟು ಮಾಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಅದಕ್ಕಾಗಿ ಕಟ್ಟಡದಲ್ಲಿ ಮಾರ್ಕಿಂಗ್ ಮಾಡಲಾಗಿದೆ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ಕೋಟಿ ರೂ. ವೆಚ್ಚದಲ್ಲಿ ಫೈರ್ ಸೇಫ್ಟಿ ಸರ್ವೀಸ್ ಹಾಗೂ ನವೀಕರಣ ಕಾಮಗಾರಿ ಕೂಡ ನಡೆಯುತ್ತಿದೆ ಎಂದು ಹೇಳಿದರು.
ಇಷ್ಟು ದಿನ ಇಲ್ಲಿರುವ ಅಂಗಡಿಗಳನ್ನು ಮುಚ್ಚಲಾಗಿತ್ತು. ಈಗ ಆರಂಭಿಸಲು ಸೂಚಿಸಲಾಗಿದೆ. ಬಾಡಿಗೆ ತೆಗೆದುಕೊಳ್ಳಬೇಕೋ ಬೇಡವೊ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ವ್ಯಾಪಾರ ಮಾಡದಂತೆ ಸೂಚಿಸಲಾಗಿದೆ. ಇದಕ್ಕೆ ವ್ಯಾಪರಸ್ಥರು ಕೂಡ ಒಪ್ಪಿದ್ದಾರೆ ಎಂದು ಹೇಳಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿತ್ತು. ಹಂತ ಹಂತವಾಗಿ ಎಲ್ಲಾ ಮಾರುಕಟ್ಟೆಯನ್ನು ತೆರೆಯಲಾಗಿತ್ತಾದರೂ ಕೆ.ಆರ್.ಮಾರ್ಕೆಟ್ನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.
ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡುವಂತೆ ರೈತರು, ವರ್ತಕರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನಾಳೆಯಿಂದ ಕೆ.ಆರ್. ಮಾರುಕಟ್ಟೆ ಪುನರಾರಂಭಿಸಲು ಅವಕಾಶ ಕಲ್ಪಿಸಿದೆ. ಇಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದೆ.