ಬೆಂಗಳೂರು,ಜ.12- ನಗರದಲ್ಲಿ ಕೊರೊನಾ ಸೋಂಕು ಉಲ್ಬಣ ಗೊಳ್ಳುತ್ತಿರುವುದರಿಂದ ಅತಿ ಜನಸಂದಣಿ ಪ್ರದೇಶವಾಗಿರುವ ಕೆ.ಆರ್. ಮಾರುಕಟ್ಟೆಯನ್ನು ಹೊರ ವಲಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಾರಿ ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೆ ನಾವು ಎರಡು ವರ್ಷಗಳಿಂದ ಸರಿಯಾಗಿ ವ್ಯಾಪಾರ ಮಾಡದೆ ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ಶಿಫ್ಟ್ ಮಾಡಿದರೆ ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಹೀಗಾಗಿ ಕೂಡಲೇ ಈ ನಿರ್ಧಾರವನ್ನು ಕೈಬಿಡಿ ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ರಾಜಕೀಯ ವ್ಯಕ್ತಿಗಳಿಗೆ ಒಂದು ನ್ಯಾಯ ನಮಗೆ ಮತ್ತೊಂದು ನ್ಯಾಯನಾ ಎಂದು ಪ್ರಶ್ನಿಸಿರುವ ವ್ಯಾಪಾರಿಗಳು ಮಾರುಕಟ್ಟೆ ಸ್ಥಳಾಂತರಿಸಿದರೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹೊರ ವಲಯಗಳಿಗೆ ಮಾರುಕಟ್ಟೆಗಳನ್ನು ಸ್ಥಳಾಂತರಿಸಿದರೆ ಜನ ಅಲ್ಲಿಗೆ ಬಂದು ವ್ಯಾಪಾರ ಮಾಡೋದಿಲ್ಲ. ಹೀಗಾಗಿ ನಮಗೆ ಇಲ್ಲಿಯೇ ಅವಕಾಶ ಕೊಡಿ ಸರ್ಕಾರದ ನಿಯಮಗಳನ್ನು ಪಾಲಿಸಿ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎಂದು ವ್ಯಾಪಾರಿಗಳು ಅಲವತ್ತುಕೊಂಡಿದ್ದಾರೆ.
