ಬಿಬಿಎಂಪಿ ಮೇಯರ್ ಕನ್ನಡ ಜಪ ಮಾಡ್ತಾರೆ, ಅಧಿಕಾರಿಗಳು ಮಾತ್ರ ಇಂಗ್ಲಿಷ್‍ ನಲ್ಲಿ ನೋಟಿಸ್ ಕೊಡ್ತಾರೆ…!

ಬೆಂಗಳೂರು, ಡಿ.12- ಮೇಯರ್ ಗೌತಮ್‍ಕುಮಾರ್ ಅವರು ಕನ್ನಡ ಭಾಷೆಗೆ ಸಂಪೂರ್ಣ ಆದ್ಯತೆ ನೀಡಬೇಕೆಂದು ಬೊಬ್ಬೆಹೊಡೆಯುತ್ತಿದ್ದರೆ. ಇತ್ತ ಅವರ ಅಧೀನ ಅಧಿಕಾರಿಗಳು ಓದು, ಬರಹ ತಿಳಿಯದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಇಂಗ್ಲಿಷ್‍ನಲ್ಲಿ ನೋಟಿಸ್ ಕೊಡುತ್ತಿದ್ದಾರೆ. ಈ ಮೂಲಕ ಪಾಲಿಕೆ ಕಚೇರಿಯಲ್ಲೇ ಕನ್ನಡ ಭಾಷೆಗೆ ಅವಮಾನ ಮಾಡಲಾಗಿದೆ.

ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಅಂಗಡಿಗಳವರಿಗೆ ತಕ್ಷಣ ಅಂಗಡಿ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳು ಇಂಗ್ಲಿಷ್‍ನಲ್ಲಿ ನೋಟಿಸ್ ನೀಡಿದ್ದಾರೆ…! ಪಾಲಿಕೆಯ ಪಶ್ಚಿಮ ವಿಭಾಗದ ಎಆರ್‍ಒ ಇಂಗ್ಲಿಷ್‍ನಲ್ಲಿ ನೋಟಿಸ್ ನೀಡಿರುವ ಅಧಿಕಾರಿ. ಪಾಲಿಕೆಯವರು ಹೇಳುವುದೊಂದು ಮಾಡುವುದೊಂದು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ಎಫ್‍ಕೆಸಿಸಿಐನವರಿಗೆ ಕನ್ನಡಕ್ಕೆ ಆದ್ಯತೆ ನೀಡುವಂತೆ ಬಿಬಿಎಂಪಿ ಸೂಚಿಸಿತ್ತು. ಆದರೆ, ಇದಕ್ಕೆ ಎಫ್‍ಕೆಸಿಸಿಐ ಫಲಕ ಬಿಡಿ ಮೊದಲು ರಸ್ತೆಗುಂಡಿ ಸರಿ ಪಡಿಸಿ, ಕಸದ ಸಮಸ್ಯೆ ಬಗೆಹರಿಸಿ ಎಂದು ಬಿಬಿಎಂಪಿಗೇ ತಿರುಗೇಟು ನೀಡಿತ್ತು.  ಇದೀಗ ಪಾಲಿಕೆಯವರೇ ಓದು, ಬರಹ ತಿಳಿಯದ ಸಣ್ಣಪುಟ್ಟ ವ್ಯಾಪಾರಸ್ತರಿಗೆ ಇಂಗ್ಲಿಷ್‍ನಲ್ಲಿ ನೋಟಿಸ್ ನೀಡುವ ಮೂಲಕ ಮುಜುಗರಕ್ಕೊಳಗಾಗಿದ್ದಾರೆ.

ಈ ಬಗ್ಗೆ ಕೆ.ಆರ್.ಮಾರುಕಟ್ಟೆ ವ್ಯಾಪಾರಿಗಳು ಪ್ರತಿಕ್ರಿಯಿಸಿ, ಇಂಗ್ಲಿಷ್ ಓದಲು, ಬರೆಯಲು ಬಂದಿದ್ದರೆ ನಾವ್ಯಾಕೆ ಇಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡಬೇಕಾಗಿತ್ತು. ನಾವು ಅವರಂತೆ ಆಫೀಸ್‍ಗಳಲ್ಲಿ ಕೂತು ಕೆಲಸ ಮಾಡುತ್ತಿದ್ದೆವು ಎಂದಿದ್ದಾರೆ.ನೋಟಿಸ್‍ನಲ್ಲಿ ಏನಿದೆ ಎಂಬುದೇ ನಮಗೆ ತಿಳಿಯದಾಗಿದೆ. ಏನೂ ಅರಿಯದ ನಮಗೆ ಈ ನೋಟಿಸ್ ಏತಕ್ಕೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯೆ:  ಪಶ್ಚಿಮ ವಿಭಾಗದ ಎಆರ್‍ಒ ಇಂಗ್ಲಿಷ್‍ನಲ್ಲಿ ವ್ಯಾಪಾರಸ್ತರಿಗೆ ನೋಟಿಸ್ ನೀಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಈ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮೇಯರ್ ಗೌತಮ್‍ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.