ಕೃಷ್ಣಾ- ಕಾವೇರಿ ನೀರಾವರಿ ಯೋಜನೆ ಸುಪ್ರೀಂಗೆ ಮತ್ತೊಂದು ರಿಟ್

Spread the love

ನವದೆಹಲಿ,ಆ.26- ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅಧಿಸೂಚನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಅರ್ಜಿ ಮತ್ತು ತಮಿಳುನಾಡಿನ ಕಾನೂನು ಬಾಹಿರ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಬಗ್ಗೆ ಸುಪ್ರೀಂಕೋರ್ಟ್‍ಗೆ ಮತ್ತೊಂದು ತಕರಾರು ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ಜಲವಿವಾದಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಕಾನೂನು ಮತ್ತು ತಾಂತ್ರಿಕ ತಜ್ಞರ ಮಹತ್ವದ ಸಭೆ ನಡೆಯಿತು. ಜಲ ವಿವಾದಗಳ ಕುರಿತು ಮಹತ್ವದ ಚರ್ಚೆ ನಡೆಸಿ ಸರ್ಕಾರ ಇಡಬೇಕಿರುವ ಹೆಜ್ಜೆಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಇಂದು ಕಾನೂನು ತಜ್ಞರ ಜೊತೆ ಚರ್ಚೆ ಮಾಡಲಾಗಿದೆ.ಪ್ರಮುಖವಾಗಿ ಕೃಷ್ಣ ಮೇಲ್ದಂಡೆಯ 3ನೇ ಹಂತದ ಯೋಜನೆಗೆ ನೆರೆಯ ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ವಿಶೇಷ ತಕರಾರು ಅರ್ಜಿ ಸಲ್ಲಿಸಿದೆ. ಸೆಪ್ಟೆಂಬರ್‍ನಲ್ಲಿ ವಿಚಾರಣೆಗೆ ಬರಲಿದ್ದು, ಕಾನೂನು ಹೋರಾಟದ ಬಗ್ಗೆ ಪೂರ್ವ ಸಿದ್ಧತೆ ಕೈಗೊಳ್ಳಲು ಕಾನೂನು ತಜ್ಞರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ತಮಿಳುನಾಡು ಸರ್ಕಾರ ಕಾವೇರಿ ಜಲಾನಯನ ತೀರಾ ಪ್ರದೇಶದ ಕೆಳಹಂತದಲ್ಲಿ ಕಾನೂನು ಬಾಹಿರವಾಗಿ ಯೋಜನೆಯನ್ನು ಆರಂಭಿಸಿದೆ. ಸುಪ್ರೀಂಕೋರ್ಟ್‍ನಲ್ಲಿ ಈ ಬಗ್ಗೆಯೂ ಅರ್ಜಿ ಸಲ್ಲಿಸಲು ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಸಭೆಯಲ್ಲಿ ತಿಳಿಸಲಾಗಿದೆ ಎಂದರು. ಮೇಕೆದಾಟು ಬಳಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಕುಡಿಯುವ ನೀರಿನ ಯೋಜನೆಗೆ ಮಧುರೈನ ನಿವಾಸಿಯೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್‍ನಲ್ಲಿರುವ ವಿವಿಧ ತಕಾರರು ಕುರಿತು ನಮ್ಮ ಕಾನೂನು ತಂಡದ ಜೊತೆಯಲ್ಲಿ ಚರ್ಚೆ ನಡೆಸಲಾಗಿದೆ. ನಿನ್ನೆ ನಮ್ಮ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಅವರನ್ನು ಭೇಟಿಯಾಗಿ ಅವರಿಂದ ಎಲ್ಲಾ ವಿವರಗಳನ್ನು ಪಡೆಯಲಾಗಿದೆ. ಶ್ಯಾಮ್ ದಿವಾನ್ ಅವರನ್ನು ಇಂದು ಬೆಳಗ್ಗೆ ಭೇಟಿಯಾಗಿ ಕೆಲವೊಂದು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ ಎಂದರು.

ನಮ್ಮ ಅಡ್ವೊಕೇಟ್ ಜನರಲ್, ಹಿರಿಯ ವಕೀಲರ ತಂಡದ ಜೊತೆ ಅಂತಾರಾಜ್ಯ ಜಲ ವ್ಯಾಜ್ಯಗಳ ಬಗ್ಗೆ ಚರ್ಚಿಸಿದ್ದೇನೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ಅಧಿಸೂಚನೆ ಬಗ್ಗೆ ತೆಲಂಗಾಣ ಹಾಕಿರುವ ಅರ್ಜಿ ವಿಚಾರಣೆಗೆ ಬರಲಿದೆ. ನಾವು ಕೂಡ ತಕ್ಷಣ ನ್ಯಾಯಾಧಿಕರಣ ತೀರ್ಪಿನ ನೋಟಿಫಿಕೇಷನ್ ಹೊರಡಿಸಬೇಕು ಎಂಬ ಆಜ್ಞಾಯನ್ನು ಕೊಡಬೇಕೆಂದು ಮನವಿ ಮಾಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಎಲ್ಲಾ ವಿಚಾರವನ್ನು ಕಾನೂನು ತಂಡದೊಂದಿಗೆ ಚರ್ಚಿಸಲಾಗಿದೆ ಎಂದರು.

ಮೇಕೆದಾಟು ಯೋಜನೆಯಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಆದರೆ ತಮಿಳುನಾಡು ಸರ್ಕಾರ ಹಾಕಿರುವ ಅರ್ಜಿ ವಿಚಾರಣೆ ಬಂದಾಗ ನಮ್ಮ ನಿಲುವನ್ನು ತಿಳಿಸಬೇಕಾಗುತ್ತದೆ. ಮಧುರೈ ಕೋರ್ಟ್‍ನಲ್ಲಿ ಸ್ಥಳೀಯರೊಬ್ಬರು ಅರ್ಜಿ ಹಾಕಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ, ಅವರ ವ್ಯಾಪ್ತಿಗೆ ಬರುವುದೂ ಇಲ್ಲ. ಹಾಗಾಗಿ ಅರ್ಜಿಯನ್ನು ವಜÁಗೊಳಿಸಬೇಕಿದೆ. ಅದಕ್ಕೆ ಅಗತ್ಯ ಕ್ರಮಕ್ಕೆ ನಿರ್ಧರಿಸಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ಮಹದಾಯಿ ವಿವಾದ ಇತ್ಯರ್ಥಕ್ಕೆ ನಿರ್ಧಾರ:
ಮಹದಾಯಿ ವಿವಾದ ಪ್ರಕರಣದ ವಿಚಾರಣೆ ಸೆಪ್ಟೆಂಬರ್ ತಿಂಗಳಿನಲ್ಲಿ ನಿಗದಿಯಾಗಿದೆ. ವಿವಾದದಲ್ಲಿನ ಮುಖ್ಯ ವಿಷಯಗಳನ್ನು ಇತ್ಯರ್ಥ ಮಾಡಬೇಕು ಎನ್ನುವುದನ್ನು ತೀರ್ಮಾನ ಮಾಡಿದ್ದೇವೆ. ಅದಕ್ಕೆ ಮಾಡಬೇಕಿರುವ ಸಿದ್ಧತೆಗಳನ್ನು ಚರ್ಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ಸುಪ್ರೀಂಗೆ ಮತ್ತೊಂದು ಅರ್ಜಿ ಸಲ್ಲಿಕೆಗೆ ತಯಾರಿ:
ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ನೋಟಿಫಿಕೇಷನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪಿಟಿಷನ್ ಅನ್ನು ಮತ್ತು ತಮಿಳುನಾಡಿನ ಕಾನೂನು ಬಾಹಿರ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಬಗ್ಗೆ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ ಸಲ್ಲಿಸಲು ತಯಾರು ಮಾಡಲು ಹೇಳಿದ್ದೇವೆ. ಸುಪ್ರೀಂಕೋರ್ಟ್‍ಗೆ ಒಂದು ಕೇಂದ್ರ ಸರ್ಕಾರಕ್ಕೆ ಒಂದು ಅರ್ಜಿ ಹಾಕಬೇಕು ಎಂಬ ತೀರ್ಮಾನವನ್ನು ಇಂದಿನ ಸಭೆಯಲ್ಲಿ ತೆಗೆದುಕೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.

ಇಂದಿನ ಸಭೆಯಲ್ಲಿ ಮಹತ್ವದ ವಿಚಾರಗಳ ಚರ್ಚೆ ಆಗಿದೆ. ಇದರ ಪ್ರಗತಿಯ ವರದಿಯನ್ನು ಇನ್ನೊಂದು ವಾರದಲ್ಲಿ ನೀಡುವಂತೆ ರಾಜ್ಯದ ಅಡ್ವೊಕೇಟ್ ಜನರಲ್‍ಗೆ ಹೇಳಿದ್ದೇನೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ಇತ್ಯರ್ಥ ಮಾಡಲು ನಮ್ಮ ಸರ್ಕಾರ ನಿರಂತರ ಪ್ರಯತ್ನ ಮಾಡಲಿದೆ ಎಂದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸಂಸದ ಶಿವಕುಮಾರ್ ಉದಾಸಿ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡÀಗಿ ಇದ್ದರು.

Facebook Comments