ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕ

Spread the love

Krishnamurthy--01

ನವದೆಹಲಿ. ಡಿ. 07 : ಆರು ತಿಂಗಳಿನಿಂದ ತೆರವಾಗಿದ್ದ ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕವಾಗಿದ್ದಾರೆ.  ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನ ಪ್ರೊಫೆಸರ್ ಆಗಿರುವ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಮುಂದಿನ 3 ವರ್ಷಗಳವರೆಗೆ ಸಿಇಎ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಅಮೆರಿಕದ ಚಿಕಾಗೋ ಬೂತ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಡಾಕ್ಟೋರೇಟ್ ಗೌರವ ಪಡೆದಿರುವ ಕೃಷ್ಣ ಮೂರ್ತಿ ಅವರು ಬ್ಯಾಂಕಿಂಗ್, ಕಾರ್ಪೊರೇಟ್ ಗವರ್ನೆನ್ಸ್ ಮತ್ತು ಆರ್ಥಿಕ ನೀತಿ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿಯ ತಜ್ಞರಲ್ಲಿ ಒಬ್ಬರೆನಿಸಿದ್ಧಾರೆ. ಈ ವಿಚಾರಗಳ ಬಗ್ಗೆ ಇವರು ಬರೆದ ಸಂಶೋಧನಾ ಪ್ರಬಂಧಗಳು ವಿಶ್ವದ ಪ್ರಮುಖ ಜರ್ನಲ್ಗಳಲ್ಲಿ ಮುದ್ರಿತವಾಗಿವೆ.

ಭಾರತದ ಸೆಬಿ ಮತ್ತು ಆರ್ಬಿಐನ ವಿವಿಧ ತಜ್ಞ ಸಮಿತಿಗಳ ಸದಸ್ಯರಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ಜೆಪಿಮಾರ್ಗನ್ ಚೇಸ್, ಐಸಿಐಸಿಐ ಮೊದಲಾದ ಸಂಸ್ಥೆಗಳಲ್ಲೂ ಇವರು ಹಣಕಾಸು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.  ಕಳೆದ ಜೂನ್ ತಿಂಗಳಲ್ಲಿ ಅರವಿಂದ್ ಸುಬ್ರಮಣಿಯನ್ ಅವರು ವೈಯಕ್ತಿಕ ಕಾರಣ ನೀಡಿ ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಿದ್ದರು. 2014ರಲ್ಲಿ ಅಧಿಕಾರ ಹಿಡಿದ ಇವರ ಅವಧಿಯಲ್ಲೇ ನೋಟ್ ಬ್ಯಾನ್, ಜಿಎಸ್ಟಿ, ಆಧಾರ್-ಜನ್ಧನ್ ಮೊದಲಾದ ಪ್ರಮುಖ ಕ್ರಮಗಳನ್ನ ಜಾರಿಗೊಳಿಸಲಾಗಿತ್ತು.

ಈಗ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಆರ್ಥಿಕ ಸಲಹೆಗಾರರಾಗಿರುವ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಮುಂದೆ ಹಲವು ಸವಾಲುಗಳಿವೆ. ಹಣಕಾಸು ಮತ್ತು ಆರ್ಥಿಕ ತಜ್ಞರಾಗಿ ಇವರು ಯಾವ ರೀತಿ ಪರಿಸ್ಥಿತಿ ನಿಭಾಯಿಸುತ್ತಾರೆಂಬುದು ಕುತೂಹಲ ಮೂಡಿಸಿದೆ.

Sri Raghav

Admin