ಕೆಆರ್‌ಎಸ್ ಭರ್ತಿ, ಮಂಗಳವಾರ ಬಾಗಿನ ಅರ್ಪಿಸಲಿದ್ದಾರೆ ಸಿಎಂ

ಬೆಂಗಳೂರು, ಅ.31- ಕೆಆರ್ಎಸ್ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ನವೆಂಬರ್ 2 ಮಂಗಳವಾರ ಕಾವೇರಿ ನದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ.

ಮುಖ್ಯಮಂತ್ರಿಯಾದ ಕೆಲ ಸಮಯದಲ್ಲೇ ಸಿಎಂ ಬೊಮ್ಮಾಯಿ ಕಾವೇರಿ ಹಾಗೂ ಕಪಿಲೆಗೆ ಬಾಗಿನ ಅರ್ಪಿಸುವ ಸೌಭಾಗ್ಯ ಪಡೆದಿದ್ದು, ಕಾವೇರಿಗೂ ಮುನ್ನ ಕಪಿಲೆಗೆ ಬಾಗಿನ ಅರ್ಪಿಸಲು ಮೈಸೂರಿನ ಹೆಚ್ಡಿ ಕೋಟೆಯಲ್ಲಿರುವ ಕಬಿನಿ ಡ್ಯಾಂಗೆ ತೆರಳಲಿದ್ದಾರೆ.

ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿದ ಬಳಿಕ ಬೆಳಗ್ಗೆ 11.35ಕ್ಕೆ ಹೆಲಿಕಾಪ್ಟರ್ ಮೂಲಕ ಕೆಆರ್ ಸಾಗರದ ಹೆಲಿಪ್ಯಾಡ್ಗೆ ಬಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂಗೆ 12 ಗಂಟೆಗೆ ತಲುಪಿ ನಂತರ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ ಮಧ್ಯಾಹ್ನ 1.15ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

ಈ ಬಾರಿ ಜಲಾಶಯ ತುಂಬುವುದು ಕಷ್ಟ ಎನ್ನಲಾಗಿತ್ತು. ಹಾಗಾಗಿ ಕೆಆರ್ಎಸ್ ಜಲಾಶಯ ತುಂಬಲಿ, ವರುಣ ಕೃಪೆ ತೋರಲಿ ಎಂದು ಕಾವೇರಿ ಮಾತೆಗೆ ಅ.7ರಂದು ಮುಖ್ಯಮಂತ್ರಿ ಪೂಜೆ ಸಲ್ಲಿಸಿದ್ದರು. ಸಿಎಂ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಬಾಗಿನ ಸರ್ಪಿಸುವ ಭಾಗ್ಯವನ್ನು ಸಿಎಂ ಬೊಮ್ಮಾಯಿ ಪಡೆದುಕೊಂಡಿದ್ದಾರೆ.

Sri Raghav

Admin