ಕೊಳ್ಳೆಗಾಲ,ಜು.12- ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾಲ್ಲೂಕಿನ ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುವಂತಾಗಿದ್ದು, ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದ ಜಮೀನುಗಳು ಪ್ರವಾಹ ದಿಂದ ಜಲಾವೃತವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಕಳೆದ 4 ವರ್ಷಗಳಿಂದ ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳ ಜನ ಈ ಭಾರಿಯು ಪ್ರವಾಹ ಭೀತಿ ಎದುರಿಸುವಂತಾಗಿದೆ. ಕೇರಳದ ಕರಾವಳಿ ತೀರದ ಜಿಲ್ಲಾಗಳಲ್ಲಿ ವರುಣ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ನಿರಂತರವಾಗಿ ಹರಿದು ಬರುತ್ತಿರುವುದರಿಂದ ಅದಾಗಲೇ ತುಂಬಿ ಭರ್ತಿಯಾಗಿದ್ದು, ಕಳೆದರಡು ದಿನಗಳಿಂದ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದ್ದು, 38 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ.
ಹಾಗೆಯೇ ಕೊಡುಗು ಜಿಲ್ಲಾ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ ಹೆಚ್ಚುವರಿ ನೀರು ಕೆಆರ್‍ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು. ಜಲಾಶಯ ಭರ್ತಿಯಾಗುತ್ತಿರುವುದರಿಂದ 72 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನದಿಗೆ ನೀರನ್ನು ಹರಿಬಿಡಲಾಗುತ್ತಿದೆ.
ಕಬಿನಿ ಹಾಗೂ ಕೆಆರ್‍ಎಸ್ 2 ಅಣೆಕಟ್ಟೆಗಳಿಂದ 1.10 ಲಕ್ಷ ಕ್ಯೂಸೆಕ್‍ಗೂ ಅಕ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿರುವುದರಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ತಾಲ್ಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡ ಕುರಿಯಾ ಗ್ರಾಮಗಳ ಜನ ಕಳೆದ ಭಾರಿಯಂತೆ ಈ ಬಾರಿ ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ.
ಈಗಾಗಲೆ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮುವೆಲ್ ಅಧಿಕಾರಿಗಳೊಡನೆ ನದಿ ತೀರದ ಗ್ರಾಮಗಳಿಗೆ ಮುಂಜಾಗೃತವಾಗಿ ಭೇಟಿ ನೀಡಿ ನದಿಯಲ್ಲಿ ಪ್ರವಾಹದ ಮಟ್ಟ ತಗ್ಗುವವರೆಗೆ ನದಿ ತೀರದ ಗ್ರಾಮಗಳ ಜನರು ನದಿ ಬಳಿ ತೆರಳುವುದಾಗಲಿ ನೀರಿಗೆ ಇಳಿಯುವುದಾಗಲಿ ಮಾಡಬಾರದು. ತಮ್ಮ ಜಾನುವಾರು, ಮಕ್ಕಳನ್ನು ನದಿಯ ಬಳಿ ತೆರಳದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟೆಚ್ಚರ ವಹಿಸಲು, ಗಂಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಹಾಗೆಯೇ ಅಣೆಕಟ್ಟೆಗಳಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲೇದರು ಅಪಾಯದ ಮಟ್ಟ ಮೀರ ಬಹುದು. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಈಗಾಗಲೆ ಕಟ್ಟೆಚ್ಚರ ವಹಿಸಿದೆ.
ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮ ವಹಿಸಲಿದೆ. ಆಗಾಗಿ ತೀರದ ಗ್ರಾಮಗಳ ಜನರು ಯಾವುದೇ ಕ್ಷಣದಲ್ಲಾದರೂ ಸ್ಥಳಾಂತರಗೊಳ್ಳಲು ಸಿದ್ಧರಿರಬೇಕು. ಅಕಾರಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಆದರೆ, ಈ ಭಾಗದಲ್ಲಿ ಭತ್ತದ ಖಾರೀಪ್ ಬೆಳೆ ಕಟಾವಿಗೆ ಬಂದಿದ್ದು, ಕೆಲವು ಕಡೆಗಳಲ್ಲಿ ಪ್ರವಾಹದಿಂದ ತಮ್ಮ ಬೆಳೆಗಳನ್ನು ರಕ್ಷಿಸಿ ಕೊಳ್ಳಲು ಮಳೆಯ ನಡುವೆ ಯು ರೈತರು ಹರಸಾಹಸ ಪಡುತ್ತಿದ್ದಾರೆ.