ಕೋಡಿಹಳ್ಳಿ ಮಾತು ಕೇಳಿ ಸಾರಿಗೆ ನೌಕರರು ಬೀದಿಗೆ ಬಿದ್ದಂತಾಗಿದೆ : ಈಶ್ವರಪ್ಪ

ಶಿವಮೊಗ್ಗ, ಡಿ.14- ಸಾರಿಗೆ ನೌಕರರು ಪ್ರತಿಭಟನೆ ಹಿಂಪಡೆಯದಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಕಿಡಿಕಾರಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 50ಕ್ಕೂ ಅಧಿಕ ವಿವಿಧ ಕಾಪೆರ್ರೇಷನ್ ಗಳಿವೆ. 4 ರಿಂದ 5 ಲಕ್ಷ ಸಿಬ್ಬಂದಿಗಳಿದ್ದು , ಅವರು ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಆದರೆ ಕೋಡಿಹಳ್ಳಿ ಮಾತು ಕೇಳಿ ಸಾರಿಗೆ ನೌಕರರು ಈಗ ಬೀದಿಗೆ ಬಿದ್ದಂತಾಗಿದೆ ಎಂದರು.

ಸಾರಿಗೆ ಸಿಬ್ಬಂದಿಗಳಿಗೆ ಕೆಲಸ ನೀಡುವಾಗಲೇ ನಾನು ಸರ್ಕಾರಿ ನೌಕರನಲ್ಲ ಎಂದು ಒಪ್ಪಿಗೆ ಪತ್ರಕ್ಕೆ ಸಹಿ ಪಡೆದ ನಂತರವೇ ಕೆಲಸ ನೀಡಲಾಗುತ್ತದೆ. ಹೀಗಿರುವಾಗ ಅವರ ಬೇಡಿಕೆ ಹೇಗೆ ಸರಿ ಎಂದು ಪ್ರಶ್ನಿಸಿದರು. ಕೋಡಿಹಳ್ಳಿ ಅವರಿಂದ ನಾಲ್ಕು ದಿನ ರಾಜ್ಯದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದ ಅವರು, ನಮ್ಮೊಂದಿಗೆ ಮಾತುಕತೆ ನಡೆಸಿ ನಂತರ ಫ್ರೀಡಂ ಪಾರ್ಕ್‍ಗೆ ತಲುಪಿದ ನಂತರ ಯೂ ಟರ್ನ್ ಹೊಡೆದಿರುವುದು ಖೇದಕರ. ಕೋಡಿಹಳ್ಳಿ ಭೇಟಿ ನಂತರ ನೌಕರರ ಈ ನಡೆ ಒಪ್ಪುವಂತಹದ್ದಲ್ಲ ಎಂದರು.

ರೈತರು ಮತ್ತು ಸಾರಿಗೆ ನೌಕರರು ಇನ್ನು ಮುಂದೆ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಚಿವರು ಸಲಹೆ ಮಾಡಿದರು. ಕೋವಿಡ್ ಓಡಿಸುವಲ್ಲಿ ರಾಜ್ಯ ಸರ್ಕಾರ ಮಗ್ನವಾಗಿದ್ದರೆ ಕೋಡಿಹಳ್ಳಿ ಚಂದ್ರಶೇಖರ್ ಸಮಾಜ ಘಾತುಕ ಶಕ್ತಿಯನ್ನು ಎತ್ತಿಹಿಡಿಯುತ್ತಿದ್ದಾರೆ. ಇವರನ್ನ ಬಗ್ಗು ಬಡಿಯುವ ಶಕ್ತಿ ಸರ್ಕಾರಕ್ಕಿದೆ ಎಂದು ಈಶ್ವರಪ್ಪ ಹೇಳದರು.

ಟ್ರೇಡ್ ಯೂನಿಯನ್‍ನ ಸದಸ್ಯರೇ ಕೋಡಿಹಳ್ಳಿ ವಿರುದ್ಧ ತಿರುಗಿಬೀಳಲಿದ್ದಾರೆ. ಕೋಡಿಹಳ್ಳಿ ಈ ರೀತಿ ನಿಲುವು ತೆಗೆದುಕೊಳ್ಳಲು ಬೇರೆ ಯಾರೋ ಅವರ ಬೆನ್ನ ಹಿಂದೆ ಇರಬೇಕು. ಇದು ರಾಜಕೀಯ ಪ್ರೇರಿತವೇ ಎನ್ನಲು ಇದು ಸೂಕ್ತ ಸಮಯವಲ್ಲ ಎಂದರು.