ಬೆಂಗಳೂರು, ಜ.6- ಪಾದಯಾತ್ರೆ ಮಾಡುವುದಾಗಿ ಚಂಡಿಯಂತೆ ಹಠ ಹಿಡಿದಿರುವ ಕಾಂಗ್ರೆಸ್ ನಾಯಕರು ಆರೋಗ್ಯ ಕೆಡಿಸಿಕೊಳ್ಳಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಕಾಂಗ್ರೆಸ್ ನಾಯಕರ ಪಾದಯಾತ್ರೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ರಾಜಕಾರಣ ಮಾಡುವ ವಿಚಾರದಲ್ಲಿ ಆರೋಗ್ಯ ಕೆಡಿಸಿಕೊಳ್ಳಬಾರದು ಎಂಬುದು ನಮ್ಮ ಮನವಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ರಾಜ್ಯದ ಆಸ್ತಿ. ಅವರೆಲ್ಲರೂ ಚೆನ್ನಾಗಿರಬೇಕು.
ಅವರು ಪಾದಯಾತ್ರೆ ಮಾಡುವುದು ಬೇಡ ಎಂದಿಲ್ಲ. ಈಗ ಬೇಡ ಎಂದಿದ್ದೇವೆ. ಮಾಡೇ ಮಾಡುತ್ತೀವಿ ಎಂದರೆ ಅವರಿಗೆ ಬಿಟ್ಟಿದ್ದು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಬದುಕಿದೆ ಎಂಬು ದನ್ನು ತೋರಿಸಲು ಪಾದ ಯಾತ್ರೆ ಮಾಡುತ್ತಿದ್ದಾರೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿದ್ದೇವೆ ಎಂದರು.
ರಾತ್ರಿ ಕಫ್ರ್ಯೂ ಶಿವಮೊಗ್ಗ ಸೇರಿದಂತೆ ಕೆಲ ಜಿಲ್ಲೆಗಳಿಗೆ ತಲುಪಿಲ್ಲ. ರಾತ್ರಿ ಕಫ್ರ್ಯು ಬಗ್ಗೆ ಬೇಸರ ವ್ಯಕ್ತಪಡಿಸಲ್ಲ. ಆದರೆ, ಜನರ ಭಾವನೆಗಳನ್ನು ಪ್ರಸ್ತಾಪಿಸಿದ್ದೇನೆ. ಎಲ್ಲೆಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದೆಯೋ ಅಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು. ಸೋಂಕು ಇಲ್ಲದ ಕಡೆ ಬಿಗಿಯಾದ ಕ್ರಮ ಅಗತ್ಯವಿಲ್ಲ ಎಂಬುದನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಇದೇ ವೇಳೆ ತಿಳಿಸಿದರು.
ತಜ್ಞರ ಸಲಹೆಯಂತೆ ಸಿಎಂ ವಾರಾಂತ್ಯ ಕಫ್ರ್ಯೂಗೆ ತೀರ್ಮಾನ ಮಾಡಿದ್ದಾರೆ ಎಂದರು. ಸಚಿವ ಮುರುಗೇಶ್ ನಿರಾಣಿ ತಮ್ಮನ್ನು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಛೇಂಬರ್ ಆಫ್ ಕಾಮರ್ಸ್ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದರಷ್ಟೇ, ಗುಜರಾತ್ ಮಾದರಿಯಲ್ಲಿ ಸಂಪುಟ ಬದಲಾಗಬೇಕೋ ಅಥವಾ ಬೇಡವೋ ಎಂಬುದನ್ನು ವರಿಷ್ಟರು ತೀರ್ಮಾನ ಮಾಡುತ್ತಾರೆ. ಬಿಜೆಪಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಎಂದು ಅವರು ಇದೇ ವೇಳೆ ಪ್ರತಿಕ್ರಿಯಿಸಿದರು.
ಪಂಜಾಬ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಿರುವ ಅಪಮಾನದ ಬಗ್ಗೆ ಎಐಸಿಸಿ ಕ್ಷಮೆಯಾಚಿಸಬೇಕು. ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ನಾಯಕರು ಈ ಘಟನೆಯನ್ನು ಖಂಡಿಸಬೇಕು ಎಂದು ಅವರು ಆಗ್ರಹಿಸಿದರು.
