ಬೆಂಗಳೂರು,ಫೆ.22- ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಮುಸ್ಲಿಮರೇ ಹೊಡೆದಿರುವುದು ಸಾಭೀತಾಗಿದೆ. ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಈಗಲಾದರೂ ನನ್ನ ಮಾತನ್ನು ಒಪ್ಪಿಕೊಳ್ಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷನನ್ನು ಕೊಲೆ ಮಾಡಿರುವವರು ಮುಸ್ಲಿಂ ಗೂಂಡಾಗಳೇ ಎಂದು ನಾನು ಹೇಳಿದ್ದೆ. ನಾನು ನಿನ್ನೆ ಎಸ್‍ಪಿ ಬಳಿ ಮಾಹಿತಿ ಪಡೆದು ಹೇಳಿಕೆ ಕೊಟ್ಟಿದ್ದೆ. ಅರೆಸ್ಟ್ ಆಗಿರೋರು ಎಲ್ಲರೂ ಮುಸ್ಲಿಮರೇ ಆಗಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈಗಾಗಲೇ ಹಲವರ ಬಂಧನ ಆಗಿದೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಿತ್ತು. ಗೋಹತ್ಯೆ ತಡೆಗೆ ಮುಂದಾದವರನ್ನ ಕೊಲೆ ಮಾಡಲಾಗಿತ್ತು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಗ್ಗೊಲೆ ಆಗುತ್ತಿದೆ. ಉದ್ದೇಶ ಪೂರ್ವಕವಾಗಿ ಇಂತಹ ಕೊಲೆ ಆಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ನಾನು ಎನ್‍ಐಎ ತನಿಖೆಗೆ ಒತ್ತಾಯ ಮಾಡಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯೂ ಈ ಕುರಿತು ಎನ್‍ಐಎ ತನಿಖೆಗೆ ಮನವಿ ಮಾಡುತ್ತೇನೆ. ತನಿಖೆಯಿಂದ ಯಾರ್ಯಾರು ಇದರ ಹಿಂದೆ ಇದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
