ಬೆಂಗಳೂರು,ಫೆ.21-ಶಿವಮೊಗ್ಗದಲ್ಲಿ ಕಳೆದ ರಾತ್ರಿ ಭಜರಂಗದಳದ ಕಾರ್ಯಕರ್ತನ ಕಗ್ಗೊಲೆಯ ಹಿಂದೆ ಮುಸ್ಲಿಂ ಗೂಂಡಾಗಳ ಕೈವಾಡವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಶಿವಮೊಗ್ಗದಲ್ಲಿ ಎಂದಿಗೂ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದೆ. ಇದರಲ್ಲಿ ಮುಸ್ಲಿಂ ಗೂಂಡಾಗಳ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದರು.
( ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ಆರೋಪಿಗಳ ಸುಳಿವು ಪತ್ತೆ..! )
ಶಿವಮೊಗ್ಗದಲ್ಲಿ ನಮ್ಮ ಸಜ್ಜನ ಕಾರ್ಯಕರ್ತನ ಕೊಲೆಯಾಗಿದೆ. ಮುಸಲ್ಮಾನ ಗೂಂಡಾಗಳಿಂದಲೇ ಕೊಲೆಯಾಗಿದೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಗಳಿಂದಲೇ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಂತಾಗಿ ಇಷ್ಟು ಧೈರ್ಯ ಬಂದಿದೆ. ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಕರಣ ಕುರಿತಂತೆ ಸರ್ಕಾರ ತನಿಖೆ ಮಾಡುತ್ತಿದೆ. ನಾನು ತಕ್ಷಣವೇ ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ. ಜನತೆಯು ಶಾಂತಿ ರೀತಿಯಲ್ಲಿ ಇರಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು.
( ಭಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ, ಶಿವಮೊಗ್ಗ ಉದ್ವಿಗ್ನ, ಹೈಅಲರ್ಟ್ ಘೋಷಣೆ )
ಕೊಲೆಗೀಡಾದ ಹರ್ಷ ತುಂಬಾ ಪ್ರಾಮಾಣಿಕ ಕಾರ್ಯಕರ್ತನಾಗಿದ್ದ. ಈ ಘಟನೆ ನಡೆದಿರುವುದು ವೈಯಕ್ತಿಕವಾಗಿ ನನಗೆ ತುಂಬ ನೋವು ತಂದಿದೆ. ಶಿವಮೊಗ್ಗದಲ್ಲಿ ಈ ಗೂಂಡಾಗಿರಿ ಬೆಳೆಯಲು ಬಿಡಲ್ಲ. ದಮನ ಮಾಡಿಯೇ ತೀರುತ್ತೇವೆ ಎಂದು ಗುಡುಗಿದರು.
ಇದರ ಬಗ್ಗೆ ಸಿಎಂ ಮತ್ತು ಗೃಹಸಚಿವರ ಜೊತೆ ಮಾತನಾಡಿದ್ದೇನೆ. ಶಿವಮೊಗ್ಗದಲ್ಲಿ ಈವರೆಗೂ ಒಬ್ಬೇ ಒಬ್ಬ ಮುಸ್ಲಿಮನು ಬಾಲ ಬಿಚ್ಚಿರಲಿಲ್ಲ. ಡಿ.ಕೆ.ಶಿವಕುಮಾರ್ ಧ್ವಜದ ವಿಚಾರದಲ್ಲಿ ಪ್ರಚೋದನಾ ಹೇಳಿಕೆ ನೀಡಿದ್ದರು. ಸೂರತ್‍ನಿಂದ ಕೇಸರಿ ಶಾಲು ತರಿಸಿದ್ದಾಗಿ ಹೇಳಿಕೆ ನೀಡಿದ್ದರು. ಡಿಕೆ ಶಿವಕುಮಾರ್ ಆ ಹೇಳಿಕೆಯಿಂದ ಪ್ರೇರಣೆ ಪಡೆದು ಮುಸ್ಲಿಂ ಗೂಂಡಾಗಳು ನಿನ್ನೆ ರಾತ್ರಿ ನಮ್ಮ ಪ್ರಾಮಾಣಿಕ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ ಎಂದು ದೂರಿದರು.
ಯುವಕನ ಕಾರ್ಯವನ್ನು ನಾವೇ ಮುಂದೆ ನಿಂತು ಮಾಡುತ್ತೇವೆ. ಈಗಾಗಲೇ ಗೃಹ ಸಚಿವರಲ್ಲಿ ಮಾತಾಡಿದ್ದೇನೆ. ಕೇಸರಿ ಶಾಲು ಹಂಚಿದ್ದಾರೆ. ರಾಷ್ಟ್ರ ಧ್ವಜ ತೆಗೆದು ಭಗಧ್ವಜ ಹಾರಿಸಿದ್ದಾರೆ ಎಂಬಂತಹ ಹೇಳಿಕೆಯಿಂದ ಕುಮ್ಮಕ್ಕು ಪಡೆದ ಮುಸ್ಲಿಂ ಗೂಂಡಾಗಳು ಈ ಕೊಲೆ ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ವಿರುದ್ಧ ನೇರ ಆರೋಪ ಮಾಡಿದರು.
