ಕೆಎಸ್‍ಎಫ್‍ಸಿಯಿಂದ ಉದ್ದಿಮೆದಾರರಿಗೆ ಪ್ರೋತ್ಸಾಹ

Social Share

ಬೆಂಗಳೂರು,ಜು.15- ರಾಜ್ಯದಲ್ಲಿ ಕೊರೊನಾ ನಂತರ ಉದ್ಯಮ ಕ್ಷೇತ್ರ ಚೇತರಿಕೆ ಕಂಡಿದ್ದು, ಪ್ರಸ್ತುತ ಕೆಎಸ್‍ಎಫ್‍ಸಿ ಕಡಿಮೆ ಬಡ್ಡಿ ದರದಲ್ಲಿ ಉದ್ಯಮಿಗಳಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದು ಪ್ರೋತ್ಸಾಹಿಸುತ್ತಿದೆ ಎಂದು ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಏಕರೂಪ್ ಕೌರ್ ತಿಳಿಸಿದರು.

ನಗರದಲ್ಲಿ ಕೆಎಸ್‍ಎಫ್‍ಸಿ ಶಾಖಾ ಕಚೇರಿ ಹಾಗೂ ಬೆಂಗಳೂರು ಗ್ರಾಮಾಂತರ ಶಾಖಾ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ (ಸೇವಾ ಕ್ಷೇತ್ರ) ಶೇ.4ರಷ್ಟು ರಿಯಾಯ್ತಿ ದರದ ಸಾಲ ಬಹುಪಯೋಗಿಯಾಗಿದೆ. ಹಲವಾರು ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕ ವಾಗಿ ಮೇಲೆ ಬರುತ್ತಿದ್ದಾರೆ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತರು ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾದ ಗುಂಜನ್ ಕೃಷ್ಣ ಮಾತನಾಡಿ, ರಾಜ್ಯ ಸರ್ಕಾರ ಕೈಗಾರಿಕೆಗಳಿಗೆ ಸಕಲ ರೀತಿಯಲ್ಲಿ ಸ್ಪಂದಿಸುತ್ತಿದೆ. ಹಲವಾರು ಸೌಲಭ್ಯಗಳನ್ನು ನೀಡಿ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಿದೆ. ಬಂಡವಾಳ ಹೂಡಿಕೆಯಲ್ಲಿ ರಾಜ್ಯದಲ್ಲಿ ಉದ್ದಿಮೆದಾರರಿಗೆ ಹಲವು ರಿಯಾಯ್ತಿಗಳು ನೀಡಿ ಔದ್ಯೋಗಿಕ ಕ್ಷೇತ್ರದಲ್ಲಿ ಹೊಸ ಪರ್ವ ಸೃಷ್ಟಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 10 ಲಕ್ಷದಿಂದ 10 ಕೋಟಿ ವರೆಗೂ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಇದಲ್ಲದೆ ಎಲ್ಲಾ ವರ್ಗದ ಉದ್ದಿಮೆದಾರರಿಗೆ 5 ಲಕ್ಷದಿಂದ 5 ಕೋಟಿ ವರೆಗೂ (ಶೇ.5.5) ಸಾಲ ನೀಡಲಾಗುತ್ತಿದೆ. ವಿಶೇಷವಾಗಿ ಸೇವಾ ಕ್ಷೇತ್ರದ ಮಹಿಳಾ ಉದ್ದಿಮೆದಾರರಿಗೆ ಎರಡು ಕೋಟಿ ವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದಲ್ಲದೆ, ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯು 670 ಕೋಟಿಯಷ್ಟು ಸಾಲದ ಅಸಲು ಮರುಪಾವತಿಗೆ ಅವಯನ್ನು ವಿಸ್ತರಿಸಿ ಉದ್ದಿಮೆದಾರರಿಗೆ ನೆರವಾಗಿದೆ ಎಂದು ತಿಳಿಸಿದರು.

ಕೆಎಸ್‍ಎಫ್‍ಸಿ ವೃತ್ತ 1ರ ಪ್ರಧಾನ ವ್ಯವಸ್ಥಾಪಕ ವೈ.ಎ.ಕಿಶೋರ್‍ಕುಮಾರ್ ಮಾತನಾಡಿ, ಸಂಸ್ಥೆ ಇದುವರೆಗೂ 1.75 ಲಕ್ಷ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ನೀಡಿದೆ. ಇನೋಸಿಸ್, ಬಯೋಕಾನ್ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು ನಮ್ಮ ಫಲಾಭವಿಗಳಾಗಿದ್ದಾರೆ. ಉದ್ದಿಮೆದಾರರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲಸೌಲಭ್ಯವನ್ನು ಸದು ಪಯೋಗಪಡಿಸಿಕೊಳ್ಳಬೇಕು ಮತ್ತು ಉದ್ಯೋಗ ಸೃಷ್ಟಿಗೆ ಸಹಕರಿಸಬೇಕೆಂದು ಉದ್ದಿಮೆದಾರರಿಗೆ ಮನವಿ ಮಾಡಿದರು.

ಈಗಾಗಲೇ ಕೆಎಸ್‍ಎಫ್‍ಸಿಯ ಜಯನಗರ ಶಾಖೆಯು ಕೇಂದ್ರೀಯ ಶಾಖೆಯೊಂದಿಗೆ ವಿಲೀನಗೊಂಡಿದೆ ಹಾಗೂ ರಾಜಾಜಿನಗರ ಶಾಖೆ ಗ್ರಾಮಾಂತರ ಶಾಖೆಯೊಂದಿಗೆ ವಿಲೀನಗೊಂಡಿದೆ. ಇದರ ಬಗ್ಗೆ ಉದ್ದಿಮೆದಾರರಿಗೆ ಜಾಗೃತಿ ಮೂಡಿಸಲಾಗಿದೆ. ಈ ಕ್ರಮದಿಂದ ಉದ್ದಿಮೆದಾರರಿಗೆ ಸಹಾಯವಾಗುತ್ತದೆ. ಸಾಲ ಸೌಲಭ್ಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.

ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಜಂಟಿ ನಿರ್ದೇಶಕರಾದ ಎನ್.ಸುರೇಶ್ ಮತ್ತು ನರೇಂದ್ರ ಬಾಬು ಅವರು ಸರ್ಕಾರದ ಸಬ್ಸಿಡಿ ಹಾಗೂ ಸಾಲ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದರು. ಇದೇ ವೇಳೆ ಉದ್ದಿಮೆದಾರರು ಮುಂದಿಟ್ಟ ಕೆಲವು ಪ್ರಶ್ನೆಗಳಿಗೆ ಸಮಪರ್ಕವಾಗಿ ಉತ್ತರ ನೀಡಿದರು ಹಾಗೂ ನೀಡಿದ ಸಲಹೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಹಾಯಕ ಪ್ರಧಾನ ವ್ಯವಸ್ಥಾಪಕ (ಬೆಂಗಳೂರು ಕೇಂದ್ರ ಶಾಖೆ) ಬಿ.ಎನ್.ಪ್ರಸಾದ್ ಅವರು ಆರಂಭದಲ್ಲಿ ಉದ್ದಿಮೆದಾರರನ್ನು ಸ್ವಾಗತಿಸಿದರೆ, ಬೆಂ.ಗ್ರಾಮಾಂತರ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ಕೆ.ಬಸವರಾಜು ಅವರು ವಂದನಾರ್ಪಣೆ ಮಾಡಿದರು.
ವ್ಯವಸ್ಥಾಪಕರಾದ ಎ.ಸುಜಾತಾ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Articles You Might Like

Share This Article