ಕೆಎಸ್ಆರ್‌ಟಿಸಿ ಮಹಿಳಾ ನೌಕರರಿಗೆ 6 ತಿಂಗಳು ಶಿಶುಪಾಲನಾ ರಜೆ

ಬೆಂಗಳೂರು,ಜ.19- ಮಹಿಳಾ ನೌಕರರಿಗೆ 180 ದಿನಗಳ ಶಿಶುಪಾಲನಾ ರಜೆ ಮಂಜೂರು ಮಾಡಲು ಕರ್ನಾಟಕ ರಾಜ್ಯ ರಸ್ತೆ ನಿಗಮದ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ನಿಗಮದ ಮಹಿಳಾ ನೌಕರರಿಗೆ ಕೆಲವು ಷರತ್ತಿಗೊಳಪಟ್ಟು ಇಡೀ ಸೇವಾವಯಲ್ಲಿ ಗರಿಷ್ಠ ಆರು ತಿಂಗಳವರೆಗೆ ಶಿಶುಪಾಲನಾ ರಜೆ ಮಂಜೂರು ಮಾಡಲು ಸುತ್ತೋಲೆ ಹೊರಡಿಸಲಾಗಿದೆ.

ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ ಅತ್ಯಂತ ಕಿರಿಯ ಮಗು, 18 ವರ್ಷ ತಲುಪುವವರೆಗಿನ ಅವಗೆ ಮಾತ್ರ ಶಿಶುಪಾಲನಾ ರಜೆ ಸೌಲಭ್ಯಕ್ಕೆ ಮಹಿಳಾ ನೌಕರರು ಅರ್ಹರಾಗಿರುತ್ತಾರೆ ಎಂದು ಕೆಎಸ್ಆರ್‌ಟಿಸಿ  ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಜೆ ಪಡೆಯುವ ಮುನ್ನ, ಪಡೆಯಲು ಅರ್ಹವಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗಿರುತ್ತಾರೆ. ಪ್ರತಿಬಾರಿ ಈ ರಜೆ ಮಂಜೂರಾತಿಯು ಕನಿಷ್ಟ 15 ದಿನಗಳಿಗಿಂತ ಕಡಿಮೆ ಇರಬಾರದು. ಸಾಂದರ್ಭಿಕ ರಜೆ ಹೊರತಾಗಿ ನಿಯಮಾನುಸಾರ ಪಡೆಯಲು ಅರ್ಹವಿರುವ ಅಸಾಧಾರಣ ರಜೆಯು ಒಳಗೊಂಡಂತೆ ಇತರ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದು.

ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯುವುದಿಲ್ಲ. ಒಂದು ವೇಳೆ ಉಪಯೋಗಿಸಿಕೊಳ್ಳದಿದ್ದಲ್ಲಿ ರಜೆಯನ್ನು ಗಳಿಕೆ ರಜೆ ಲೆಕ್ಕಕ್ಕೆ ಜಮೆಗೊಳಿಸಿ ನಗದೀಕರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.