KSRTCಗೆ ಡಿಕ್ಕಿ ಹೊಡೆದ ಕಾರು, ಚಾಲಕ ದುರ್ಮರಣ

Social Share

ಬೆಂಗಳೂರು, ಜು. 21- ಏರ್‌ಪೋರ್ಟ್‌ ಕಡೆಗೆ ಹೋಗುತ್ತಿದ್ದ ಕಾರು ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.

ಮಾಗಡಿ ತಾಲ್ಲೂಕಿನ ನಿವಾಸಿ ಲೋಹಿತ್ ಪ್ರಸಾದ್ (24) ಮೃತಪಟ್ಟ ಕಾರು ಚಾಲಕ. ಬೆಂಗಳೂರು- ಬಳ್ಳಾರಿ ರಸ್ತೆಯಲ್ಲಿ ಬೆಳಗಿನ ಜಾವ 3.15ರ ಸುಮಾರಿನಲ್ಲಿ ಏರ್‌ಪೋರ್ಟ್‌ ಕಡೆಗೆ ಕಾರು ಅತಿವೇಗವಾಗಿ ಹೋಗುತ್ತಿತ್ತು.

ಬಿಎಸ್‍ಎಫ್ ಕ್ಯಾಂಪಸ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರು ದಿಕ್ಕಿನಲ್ಲಿ ಮಂತ್ರಾಲಯದಿಂದ ನಗರಕ್ಕೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಗುದ್ದಿದ ಪರಿಣಾಮ ಲೋಹಿತ್ ಪ್ರಸಾದ್ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದು ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Articles You Might Like

Share This Article