ಸ್ಕೂಟರ್‌ಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ : ಮಹಿಳೆ ಗಂಭೀರ

Social Share

ಬೆಂಗಳೂರು,ಅ.17- ರಸ್ತೆ ಗುಂಡಿ ತಪ್ಪಿಸಲು ಸ್ಕೂಟರನ್ನು ಬಲಭಾಗಕ್ಕೆ ಚಲಾಯಿಸಿದ್ದರಿಂದ ಹಿಂದೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಸ್ಕೂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಗಾಯಗೊಂಡಿರುವ ಘಟನೆ ವಾಟಾಳ್ ನಾಗರಾಜ್ ರಸ್ತೆಯ ಲುಲು ಮಾಲ್ ಬಳಿ ಇಂದು ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಗಾಯತ್ರಿನಗರದ ನಿವಾಸಿ ಉಮಾ(42) ಗಂಭೀರ ಗಾಯಗೊಂಡಿದ್ದು, ವನಿತಾ(22)ರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವನಿತಾ ಅವರು ತಾಯಿ ಉಮಾ ಅವರನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ಶ್ರೀನಗರದಿಂದ ಇಂದು ಬೆಳಗ್ಗೆ ಬರುತ್ತಿದ್ದಾಗ ಲುಲು ಮಾಲ್ ಬಳಿಯ ಗುಂಡಿ ಗಮನಿಸಿ, ತಕ್ಷಣ ತಮ್ಮ ಸ್ಕೂಟರ್‍ನ್ನು ಬಲಕ್ಕೆ ಪಡೆದುಕೊಳ್ಳುತ್ತಿದ್ದಂತೆ ಹಿಂದಿನಿಂದ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಆ ಸಂದರ್ಭದಲ್ಲಿ ತಾಯಿ-ಮಗಳು ಕೆಳಕ್ಕೆ ಬಿದ್ದಾಗ ತಾಯಿ ಉಮಾ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಮಗಳಿಗೂ ಸಣ್ಣಪುಟ್ಟ ಗಾಯಗಳಾಯಿತು. ತಕ್ಷಣ ಗಾಯಾಳು ತಾಯಿ ಮತ್ತು ಮಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಸುದ್ದಿ ತಿಳಿದು ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರತ್ಯಕ್ಷದರ್ಶಿಯ ಹೇಳಿಕೆ: ಇಂದು ಬೆಳಗ್ಗೆ ಈ ರಸ್ತೆಯಲ್ಲಿ ಇಬ್ಬರು ಮಹಿಳೆಯರು ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಮುಂದೆ ಗುಂಡಿ ಇದ್ದ ಕಾರಣ ಆ ಮಹಿಳೆ ಒಮ್ಮೆಲೆ ಬ್ರೇಕ್ ಹಾಕಿ ಪಕ್ಕಕ್ಕೆ ಚಲಾಯಿಸುತ್ತಿದ್ದಂತೆ ಹಿಂದೆ ಬಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

Articles You Might Like

Share This Article