ಅಗತ್ಯ ವಸ್ತುಗಳ ಸಾಗಾಟಕ್ಕೆ ಸಾರಿಗೆ ಇಲಾಖೆಯಿಂದ ಸಹಾಯವಾಣಿ ಪ್ರಾರಂಭ

ಬೆಂಗಳೂರು, ಏ.5-ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸರಾಗ ಸಾಗಾಟಕ್ಕೆ ಸಾರಿಗೆ ಇಲಾಖೆಯಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಹೊರ ರಾಜ್ಯದಿಂದ ಬರುವ ಪ್ರಯಾಣಿಕ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸರಕು ಸಾಗಣೆ ಮತ್ತು ದಿನನಿತ್ಯಕ್ಕೆ ಬೇಕಾದ ವಸ್ತುಗಳ ಸರಾಗ ಸಾಗಾಟಕ್ಕೆ ಸಾರಿಗೆ ಇಲಾಖೆಯಿಂದ ಸೂಕ್ತ ಕ್ರಮ ವಹಿಸಲು ಹಾಗೂ ರಾಜ್ಯದಲ್ಲಿರುವ ಎಲ್ಲಾ ಸಾರಿಗೆ ಕಚೇರಿಗಳ ನಿರಂತರ ಸಂಪರ್ಕ ಹೊಂದಿ ತುರ್ತು ಮಾಹಿತಿಗಳನ್ನು ಪಡೆಯಲು 24*7 ಮಾದರಿಯಲ್ಲಿ ವಿಶೇಷ ಸಹಾಯವಾಣಿ ಹಾಗೂ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ)ಯನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ದಿನನಿತ್ಯಕ್ಕೆ ಬೇಕಾಗುವ ಅಗತ್ಯವಸ್ತುಗಳ ನಿರಂತರ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಂಘ ಸಂಸ್ಥೆ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಸೂಕ್ತ ಕ್ರಮ ಜರುಗಿಸಲು ಈ ವ್ಯವಸ್ಥೆ ಅನುಕೂಲವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಸಾರ್ವಜನಿಕರಿಗೆ ಅಗತ್ಯವಾಗಿರುವ ಅಗತ್ಯ ವಸ್ತುಗಳು ಕೊರತೆಯಾಗದಂತೆ ವಾಹನಗಳನ್ನು ಒದಗಿಸಲು ಸೂಕ್ತ ಕ್ರಮ ವಹಿಸಲಾಗುವುದು. ಇವಲ್ಲದೇ ಸಾರಿಗೆ ವಲಯದ ಸಮಸ್ಯೆಗಳಿಗೂ ಇದರಿಂದ ಪರಿಹಾರ ಪಡೆದುಕೊಳ್ಳಬಹುದು ಎಂದಿದ್ದಾರೆ.

ಸಹಾಯವಾಣಿ -ನಿಯಂತ್ರಣ ಕೊಠಡಿ ದೂ: 080-22236698 ಮತ್ತು ಮೊಬೈಲ್ ಸಂಖ್ಯೆ: 9449863214 ಕಚೇರಿಯ ವಿಳಾಸ: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಛೇರಿ, 1 ನೇ ಮಹಡಿ, ಬಿ.ಎಂ.ಟಿ.ಸಿ. ಸಂಕೀರ್ಣ ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-560027. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಅವರು ಕೋರಿದ್ದಾರೆ.

Sri Raghav

Admin