ಸಾರಿಗೆ ನೌಕರರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

Social Share

ಬೆಂಗಳೂರು,ಜ.24- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಾರಿಗೆ ನೌಕರರ ಒಕ್ಕೂಟ ಕರೆ ನೀಡಿದ್ದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ.
ರಾಜಧಾನಿ ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಮಂಡ್ಯ, ರಾಮನಗರ, ಶಿವಮೊಗ್ಗ, ಮಂಗಳೂರು, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಾರಿಗೆ ಸಂಚಾರ ಎಂದಿನಂತೆ ಕಂಡುಬಂತು.

ಸುಮಾರು 82 ಡಿಪೋಗಳಿಂದ 3500 ಬಸ್ಗಳ ಪೈಕಿ 3383 ಬಸ್ಗಳು ಸಂಚಾರ ನಡೆಸಿವೆ. ಕೆಲವು ಕಡೆ ಮಾತ್ರ ಬೆರಳಣಿಕೆ ಬಸ್ಗಳನ್ನು ಸ್ಥಗಿತಗೊಳಿಸಲಾಗಿತ್ತಾದರೂ ಇದರಿಂದ ಪ್ರಯಾಣಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ.

ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸೇರಿದಂತೆ ಒಟ್ಟು ನಾಲ್ಕು ನಿಗಮಗಳ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದರು. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಸಾಂಕೇತಿಕವಾಗಿ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮುಂಜಾಗ್ರತಾ ಕ್ರಮವಾಗಿ ಬಸ್ ಹೊರಡುವ ನಿಲ್ದಾಣ ಮತ್ತು ಅಲ್ಲಲ್ಲಿ ಕೆಲವು ಕಡೆ ಪೊಲೀಸರ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಈ ಹಿಂದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವು ನೌಕರರನ್ನು ವಜಾಗೊಳಿಸಿದ ಪರಿಣಾಮ ಇಲ್ಲದ ಉಸಾಬರಿ ನಮಗೇಕೆ ಎಂದು ಮೌನಕ್ಕೆ ಶರಣಾಗಿದ್ದರು.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಾರಿಗೆ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಬಲವಂತವಾಗಿ ಸಿಬ್ಬಂದಿಯನ್ನು ಪ್ರತಿಭಟನೆಗೆ ಕರೆತರದಂತೆ ಕಟ್ಟುನಿಟ್ಟಿನ ಸೂಚನೆ ನೀಡಾಗಿತ್ತು.

ಅಲ್ಲದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದೆ ಹೋರಾಟಕ್ಕೆ ನೈತಿಕ ಬೆಂಬಲವನ್ನು ಘೋಷಿಸಿ ಬಹುತೇಕರು ದೂರ ಉಳಿದಿದ್ದರು.

ಹೈಡ್ರೋಜನ್ ಶಕ್ತಿ ಉತ್ಪಾದನೆಯಲ್ಲಿ ಜಾಗತಿಕ ಪೈಪೋಟಿಗೆ ಗುಜರಾತ್ ತಯಾರು

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತ ಸುಬ್ಬರಾವ್ ನಾವು ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ಅಥವಾ ಮುಷ್ಕರ ನಡೆಸುತ್ತಿಲ್ಲ. ನಮ್ಮದು ಅಹಿಂಸಾ ಮಾರ್ಗ ಮತ್ತು ಶಾಂತಿಯುತ ಹೋರಾಟದ ಮಾರ್ಗವಾಗಿದೆ.

ಜನರಿಗೆ ಸಮಸ್ಯೆಯೊಡ್ಡಿ ಮುಷ್ಕರ ನಡೆಸಬೇಕೆಂಬ ದುರದ್ದೇಶವಿಲ್ಲ. ಸರ್ಕಾರ ಕೊಟ್ಟ ಮಾತಿನಂತೆ ನಮ್ಮ ಬೇಡಿಕೆಗಳನ್ನು ಈಡೇರಿಸಲೇಬೇಕು. ಈ ಹಿಂದೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೂ ಇದುವರೆಗೂ ಈಡೇರಿಸಿಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ.

ಆದಷ್ಟು ಶೀಘ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಪ್ರತಿಭಟನೆ ಇಲ್ಲವೇ ಮುಷ್ಕರ ನಡೆಸುವುದೇ ಅಂತಿಮ ಗುರಿಯಲ್ಲ. ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ವೇತನ ಕೊಡಲಾಗುತ್ತದೆ. ನಮ್ಮ ಬೇಡಿಕೆಗಳು ನ್ಯಾಯಯುತವಾಗಿರುವುದರಿಂದ ಸರ್ಕಾರ ಈಡೇರಿಸಲೇಬೇಕೆಂದು ಒತ್ತಾಯಿಸಿದರು.

KSRTC Sftaff Strike

Articles You Might Like

Share This Article