ಬೆಂಗಳೂರು,ಜ.26-ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೆಎಸ್ಆರ್‌ಟಿಸಿಯ ನಾಲ್ಕು ಸಾರಿಗೆ ನಿಗಮಗಳನ್ನು ಒಂದೇ ನಿಗಮವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ನೇತೃತ್ವದ ಸಾರಿಗೆ ನಿಗಮಗಳ ಪುನರಚನಾ ಸಮಿತಿಗೆ ನೌಕರರ ಸಂಘದ ಪದಾಧಿಕಾರಿಗಳು ಈ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಕಾಣಿಸಿಕೊಂಡ ನಂತರ ಸಾರಿಗೆ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬಸ್‍ಗಳ ನಿರ್ವಹಣೆ, ಡಿಪೋಗಳ ಖರ್ಚುವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೆ ನಿಗಮಗಳು ಪರದಾಡುವಂತಾಗಿದೆ. ಇದುವರೆಗೂ ಸಾರಿಗೆ ನಿಗಮಗಳು 4500 ಕೋಟಿ ರೂ.ಗಳ ನಷ್ಟ ಎದುರಿಸಿದೆ. 1997 ರಿಂದ ಇಲ್ಲಿಯವರೆಗೆ ಪಿಎಫ್, ಎಲ್‍ಐಸಿ, ನಿವೃತ್ತಿವೇತನ ಸೇರಿದಂತೆ 1700 ಕೋಟಿ ರೂ.ಗಳನ್ನು ನೌಕರರಿಗೆ ನೀಡಬೇಕಾಗಿದೆ.
ಹೀಗಾಗಿ ನಾಲ್ಕು ನಿಗಮಗಳನ್ನು ವೀಲಿನಗೊಳಿಸಿ ಆಡಳಿತದ ದೃಷ್ಟಿಯಿಂದ ಎಲ್ಲ ನಿಗಮಗಳನ್ನು ಒಂದುಗೂಡಿಸುವಂತೆ ಕೆಎಸ್‍ಆರ್‍ಟಿಸಿ ಸ್ಪಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ಮನವಿ ಮಾಡಿಕೊಂಡಿದ್ದಾರೆ.
ಸಾರಿಗೆ ನೌಕರರ ಈ ಬೇಡಿಕೆಗೆ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರಿಂದಲೂ ಬೆಂಬಲ ವ್ಯಕ್ತವಾಗಿದ್ದು ಈ ಕುರಿತಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.
1961ರಲ್ಲಿ ಆರಂಭವಾಗಿದ್ದ ಕೆಎಸ್‍ಆರ್‍ಟಿಸಿ ಸಂಸ್ಥೆಯನ್ನು 1997ರಲ್ಲಿ ನಾಲ್ಕು ವಿಭಾಗಗಳನ್ನಾಗಿ ವಿಭಜಿಸಲಾಗಿತ್ತು. ಆಗಲೂ ನೌಕರರು ವಿಭಜನೆ ಬೇಡ ಎಂದು ವಾದ ಮಂಡಿಸಿದ್ದರು.
