‘ಕರ್ನಾಟಕ ಬಂದ್’ ದಿನ ಕರ್ತವ್ಯಕ್ಕೆ ಹಾಜರಾಗದಿದ್ದರೆ ಸಾರಿಗೆ ನೌಕರರ ಸಂಬಳ ಕಟ್

ಬೆಂಗಳೂರು,ಡಿ.26- ಎಂಇಎಸ್ ನಿಷೇಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿ.31ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ಸಾರಿಗೆ ಸಂಸ್ಥೆಯ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.

ಡಿ.31ರಂದು ಕರ್ತವ್ಯಕ್ಕೆ ಗೈರು ಹಾಜರಾಗುವ ನೌಕರರ ವೇತನ ಕಡಿತಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಕೆ.ಎಸ್.ಆರ್.ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳು ಅಗತ್ಯ ಸೇವಾಗಳಡಿಯಲ್ಲಿ ಬರುವುದರಿಂದ ಯಾವುದೇ ಕಾರಣಕ್ಕೂ ಬಸ್ ಸಂಚಾರ ನಿಲ್ಲಿಸುವಂತಿಲ್ಲ.

ಹೀಗಾಗಿ ಎಲ್ಲ ನೌಕರರು ತಪ್ಪದೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಾರದ ರಜೆ, ದೀರ್ಘಾವ ರಜೆಯಲ್ಲಿರುವ ನೌಕರರನ್ನು ಹೊರತುಪಡಿಸಿದರೆ ಉಳಿದೆಲ್ಲ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಬೇಕು. ಬಂದ್ ಕರೆ ಹಿನ್ನೆಲೆಯಲ್ಲಿ ವಿನಾಕಾರಣ ರಜೆ ಪಡೆದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ರಾಜ್ಯ ಸಾರಿಗೆ ನೌಕರರ ಒಕ್ಕೂಟಗಳು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಸಂದೇಶವನ್ನು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Sri Raghav

Admin