RSS ಟೀಕಿಸಿದ ಕುಮಾರಸ್ವಾಮಿಗೆ ಸಿಟಿ ರವಿ ತಿರುಗೇಟು
ಬೆಂಗಳೂರು,ಅ.17- ಆರ್ ಎಸ್ ಎಸ್ ಹಾಗೂ ಅದರ ಸೇವಾ ಕಾರ್ಯದ ಬಗ್ಗೆ ಟೀಕೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಮನಗರ ಜಿಲ್ಲೆಯ ಕನಕಪುರದ ಗೋಗೆರೆದೊಡ್ಡಿಯ ಯಶವಂತ್ಗೌಡ ರಾಷ್ಟ್ರೋತ್ತಾನ ಪರಿಷತ್ನಲ್ಲಿ ಉಚಿತ ತರಬೇತಿ ಪಡೆದು ಐಐಟಿ ಪ್ರವೇಶಿಸಿ ಸಾಧನೆ ಮಾಡಿದ್ದಾರೆ.
RSS ಬಗ್ಗೆ ಟೀಕೆ ಮಾಡುತ್ತಾ ಜನರ ಮೂಗಿಗೆ ತುಪ್ಪಸವರುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಹರಸಾಹಸ ಪಡುತ್ತಿರುವ ನಾಯಕರೊಬ್ಬರು RSS ನಿಂದಿಸುವ ಮುನ್ನ ಕಣ್ಣುತೆರೆದು ನೋಡಿದರೆ ಒಳ್ಳೆಯದು ಎಂದು ಕುಹಕವಾಡಿದ್ದಾರೆ. ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭೆಗಳಿಗೆ ತಕ್ಕ ಮನ್ನಣೆಯನ್ನು ರಾಷ್ಟ್ರೋತ್ತಾನ ಪರಿಷತ್ ನೀಡುತ್ತಿದೆ.
IIT ಪ್ರವೇಶ ಪಡೆಯಲು ಲಕ್ಷಗಟ್ಟಲೆ ಖರ್ಚು ಮಾಡಬೇಕು. RSS ಅಂಗವಾದ ರಾಷ್ಟೋತ್ತಾನ ಪರಿಷತ್ ವಿದ್ಯಾರ್ಥಿಗಳ ಪಾಲಿಗೆ ಕಾಮಧೇನುವಾಗಿದೆ. ಪೊರೆ ಬಂದ ಕಣ್ಣುಗಳಿಂದ RSS ನೋಡುವ ನಾಯಕರು ಈ ಸುದ್ದಿ ಓದಲು ಕಣ್ಣು ಸರಿ ಮಾಡಿಕೊಳ್ಳಲಿ ಎಂದು ಕುಮಾರಸ್ವಾಮಿಗೆ, ಸಿಟಿ ರವಿ ತಿರುಗೇಟು ನೀಡಿದ್ದಾರೆ.