ಬೆಂಗಳೂರು, ಫೆ.18-ರಾಜ್ಯ ವಿಧಾನ ಮಂಡಲದ ಅಧಿವೇಶನದ ಕಲಾಪಕ್ಕೆ ಕುಣಿಕೆ ಬಿಗಿಯುವ ಹೀನ ರಾಜಕಾರಣ ನಿಲ್ಲಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಜನರು ಕಷ್ಟದಲ್ಲಿದ್ದಾರೆ. ಕೋವಿಡ್‌ನಿಂದ ಅವರ ಬದಕಿನ ಬವಣೆ ಹೆಚ್ಚಾಗಿ ರೋಸಿ ಹೋಗಿದ್ದಾರೆ. ಅವರು ರೊಚ್ಚಿಗೇಳುವ ಮುನ್ನ ಆಡಳಿತಾರೂಢ ಬಿಜೆಪಿ ಮತ್ತು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಎಚ್ಚೆತ್ತುಕೊಂಡು ತಮ್ಮ ಜನವಿರೋಧಿ ನೀತಿ ಬದಲಿಸಿಕೊಳ್ಳಬೇಕು ಒತ್ತಾಯಿಸಿದ್ದಾರೆ.
ಕಳೆದೆರಡು ದಿನಗಳ ವಿಧಾನಮಂಡಲ ಕಲಾಪ ರಾಜಕೀಯ ಪ್ರತಿಷ್ಠೆಗೆ ಆಹುತಿಯಾಗಿದೆ. ಬೆಳಗಾವಿ ಕಲಾಪವನ್ನು ಬಲಿ ಪಡೆದ ಮೇಲೂ ರಾಜ್ಯಪಾಲರ ಭಾಷಣದ ಮೇಲೆ ಅಮೂಲ್ಯ ಚರ್ಚೆ ನಡೆಸಬೇಕಿದ್ದ ಈ ಸದನಕ್ಕೂ ಅದೇ ಚಾಳಿ ವಕ್ಕರಿಸಿದೆ ಎಂದಿದ್ದಾರೆ.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಹೇಳಿದ ಈ ಮಾತು ಪ್ರಜಾಸತ್ತೆಯನ್ನು ಗೌರವಿಸುವ ಪ್ರತಿ ವ್ಯಕ್ತಿಗೂ ದಾರಿದೀಪ. ಆದರೆ, ಇವತ್ತು ಪ್ರಜಾಪ್ರಭುತ್ವವೆಂದರೆ, ರಾಜಕೀಯದಿಂದ, ರಾಜಕೀಯಕ್ಕಾಗಿ, ರಾಜಕೀಯಕ್ಕೊಸ್ಕರವೇ ಎನ್ನುವಂತಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಗ್ರಹಣ ಹಿಡಿಸುವ ಕೆಲಸ ನಡೆದಿದೆ.
ಹತ್ತು ನಿಮಿಷ ಧರಣಿ, ಆಮೇಲೆ ಕಲಾಪ ಮುಂದೂಡುವುದು, ಸದನ ನಡೆಯುವ ರೀತಿ ಇದೇನಾ? ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ1.5-2 ಕೋಟಿ ರೂ.ನಷ್ಟು ಪೋಲಾಗುವ ಜನರ ತೆರಿಗೆ ಹಣಕ್ಕೆ ಉತ್ತರದಾಯಿತ್ವ ಯಾರದ್ದು? ಅವರ ನಿರೀಕ್ಷೆಗಳನ್ನು ಕಾಲ ಕಸ ಮಾಡಿಕೊಂಡ ರಾಜಕೀಯ ಪ್ರತಿಷ್ಠೆಗೆ ಕೊನೆ ಇಲ್ಲವೆ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಕೋವಿಡ್‌ನಿಂದ ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಯಿತು. ಈಗ ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಹೊಣೆ ಯಾರು? ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಇಲ್ಲವೇ?
ಕಲಾಪಕ್ಕೆ ಜನಪರ ಅಜೆಂಡಾ ಇರಬೇಕೆ ವಿನಾ ಚುನಾವಣೆ ಅಜೆಂಡಾ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನವು ಮತ ಗಳಿಕೆಗೆ ಗುರಾಣಿ ಆಗಿರುವುದು ದುರದೃಷ್ಟಕರ ಎಂದಿದ್ದಾರೆ. ತಮ್ಮ ಪ್ರತಿಷ್ಠೆಗೆ ಕಲಾಪವನ್ನು ಹಳಿತಪ್ಪಿಸಿ ಜನರ ನಿರೀಕ್ಷೆಗಳನ್ನು ಹೊಸಕಿ ಹಾಕುವುದು ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ನಿದರ್ಶನ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಹೆಚ್.ಡಿ.ಕೆ.ಹೇಳಿದ್ದಾರೆ.
