ಸುಮಲತಾ ವಿರುದ್ಧ ಮತ್ತೆ ಗುಡುಗಿದ ಎಚ್‍ಡಿಕೆ

ಮಂಡ್ಯ, ಜು.9- ಅಂಬರೀಶ್ ಮೃತಪಟ್ಟ ಸಂದರ್ಭದಲ್ಲಿ ನಾನು ಸಿಎಂ ಆಗಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಸಿಎಂಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಮದ್ದೂರು ತಾಲ್ಲೂಕು ಭಾರತಿನಗರದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದರು ಹಾಗೂ ರೈತ ಹೋರಾಟಗಾರ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅಂದು ಅಂಬರೀಶ್ ಪಾರ್ಥೀವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದೇ ಬೇಡ ಎಂದು ಹೇಳಿದ್ದರು. ಆದರೆ ನಾನೇ ಅಂಬರೀಶ್ ಅವರ ಹುಟ್ಟೂರಿಗೆ ತೆಗೆದು ಕೊಂಡು ಹೋಗಬೇಕಾಗುತ್ತೆ ಎಂದು ಹೇಳಿ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿಸಿದ್ದೆ. ಈಗ ಹೊಸರೀತಿಯ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈಗ ವಿಷ್ಣುವರ್ಧನ್ ಸ್ಮಾರಕ ವಿಚಾರ ಏನಾಯಿತು. ಈವರೆಗೂ ಸ್ಮಾರಕ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಸರ್ಕಾರದವರು ಈವರೆಗೆ ಏನಾದರೂ ಮಾಡಿದಾರಾ? ಅಂಬರೀಶ್ ನಿಧನರಾದಾಗ ನಾನಿಲ್ಲದಿದ್ದರೆ ಅಂದು ಏನಾಗುತ್ತಿತ್ತು. ಸುಮಲತಾ ಅವರು ವಿಶೇಷ ಮಹಿಳೆ. ಹಾಗಾಗಿ ಅವರಂತಹ ವಿಶೇಷ ಮಹಿಳೆ ಬಗ್ಗೆ ಮಾತನಾಡುವುದು ಬೇಡ ಎಂದು ವ್ಯಂಗ್ಯವಾಡಿದರು.

ನಾನು ಸಿಎಂ ಆಗಿದ್ದಾಗ ಅಕ್ರಮ ಗಣಿಗಾರಿಕೆಯನ್ನು ಬಂದ್‍ಮಾಡಿಸಿದ್ದೇ . ನಿಷೇಧಾಜ್ಞೆಯನ್ನು ಜಾರಿ ಮಾಡಿ ಕ್ರಮ ಕೈಗೊಂಡಿದ್ದೆ. ಈಗ ಕಳೆದ ನಾಲ್ಕುತಿಂಗಳಿಂದ ಅಕ್ರಮ ಗಣಿಗಾರಿಕೆ ನಡೆಯುತಿಲ್ಲ ಎಂದು ಸಚಿವರೇಸ್ಪಷ್ಟಪಡಿಸಿದ್ದಾರೆ. ಮೈಸೂರುಸಂಸದರೂ ಈ ಬಗ್ಗೆ ಸುದೀರ್ಘ ಹೇಳಿಕೆ ಕೊಟ್ಟಿದ್ದಾರೆ. ಆದರೂ ಕೂಡ ಇವರು ಪರಿಶೀಲನೆಗೆಂದು ಹೋಗಿದ್ದಾದರೂ ಯಾಕೆ ಎಂದು ಪ್ರಶ್ನಿಸಿದರು.

ಕೆ.ಆರ್.ಎಸ್. ಬಿರುಕು ವಿಚಾರವಾಗಿ ಇನ್ನೂ 100 ವರ್ಷವಾದರೂ ಕೆ.ಆರ್.ಎಸ್. ಡ್ಯಾಂಗೆ ಏನೂ ಆಗಲ್ಲ. ವಿಶೇಶ್ವರಯ್ಯನವರು ಕಟ್ಟಿರುವ ಡ್ಯಾಂ ಸುರಕ್ಷಿತವಾಗಿದೆ ಎಂದು ಹೇಳಿದರು.ಒಬ್ಬರನ್ನು ವೈಭವೀಕರಿಸಿ ಮತ್ತೊಬ್ಬರನ್ನು ತುಳಿಯುವ ಕೆಲಸ ಮಾಡಬೇಡಿ ಎಂದು ಮಾಧ್ಯಮದವರ ವಿರುದ್ದ ಎಚ್‍ಡಿಕೆ ಕಿಡಿಕಾರಿದರು. ನನ್ನದೂ ಒಂದು ನ್ಯೂಸ್ ಚಾನಲ್ ಇದೆ ನಾನೂ ಯಾವತ್ತೂ ಹಣ ನೀಡಿ ಸುದ್ದಿ ಮಾಡಿಸಿಕೊಂಡವನಲ್ಲ ಆದರೆ ಮಾಧ್ಯಮದವರು ಒಬ್ಬರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

2008ರಲ್ಲಿ ನಾನು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗಿನಿಂದಲೂ ಸುದ್ದಿ ವಾಹಿನಿಗಳಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ವರದಿಗಳನ್ನು ಮಾಡಡಲಾಗುತ್ತಿದೆ. ನನ್ನ ಹೇಳಿಕೆಗಳನ್ನು ತಿರುಚಿ ವರದಿ ಮಾಡಿ ಎತ್ತಿಕಟ್ಟುವ ಕೆಲಸ ಮಾಡುತ್ತಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು, ಈ ಸಂಧರ್ಭದಲ್ಲಿ ಶಾಸಕರಾದ ಅನ್ನದಾನಿ,ಅಪ್ಪಾಜೀಗೌಡ,ತಮ್ಮಣ್ಣ,ಜಿಲ್ಲಾಧ್ಯಕ್ಷ ರಮೇಶ್, ಮುಂತಾದವರು ಇದ್ದರು.